ನವದೆಹಲಿ: ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾನಿಲ್ ವಿಕ್ರಮ್ ಸಿಂಘೆ ನೂತನ ಪ್ರಧಾನಿಯಾಗಿ ಆಯ್ಕೆಯಾದ ನಂತರವೂ ಆಹಾರ, ಇಂಧನ ಕೊರತೆಯಿಂದ ಕಂಗೆಟ್ಟಿರುವ ಜನರು ಶುಕ್ರವಾರ ರಾತ್ರಿಯಿಂದ ಮತ್ತೆ ಪ್ರತಿಭಟನೆಗೆ ಇಳಿದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಯುಎಇ ನೂತನ ಅಧ್ಯಕ್ಷರಾಗಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್
ಎಎನ್ ಐ ನ್ಯೂಸ್ ಏಜೆನ್ಸಿ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಭಾರೀ ಪ್ರಮಾಣದಲ್ಲಿ ಸೇರಿರುವ ಜನರು ಖಾಲಿ ಎಲ್ ಪಿಜಿ ಸಿಲಿಂಡರ್ ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವುದು ದಾಖಲಾಗಿದೆ.
ಅಡುಗೆ ಅನಿಲವೂ ಇಲ್ಲ, ತಿನ್ನಲಿಕ್ಕೂ ಇಲ್ಲ. ನಮಗೆ ಕಳೆದ ಎರಡು ತಿಂಗಳಿನಿಂದ ಅಡುಗೆ ಅನಿಲ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ಎಎನ್ ಐಗೆ ತಿಳಿಸಿದ್ದಾರೆ. ಶ್ರೀಲಂಕಾ ಸರ್ಕಾರ ಶನಿವಾರ (ಮೇ 14) 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಕೆ ಮಾಡಿದ ನಂತರ ಪ್ರತಿಭಟನಾಕಾರರು ಮತ್ತೆ ಬಿದಿಗಿಳಿದಿರುವುದಾಗಿ ವರದಿಯಾಗಿದೆ.
ರಾನಿಲ್ ವಿಕ್ರಮ ಸಿಂಘೆ ನೂತನ ಪ್ರಧಾನಿಯಾಗಿ ಆಯ್ಕೆಯಾದ ನಂತರ ಸರ್ಕಾರದ ವಿರೋಧಿ ಗುಂಪು ಮತ್ತು ಭದ್ರತಾ ಪಡೆ ನಡುವೆ ನಡೆದ ಘರ್ಷಣೆಯಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ನಂತರ ವಿಕ್ರಮ ಸಿಂಘೆ ಕಠಿಣ ನಿರ್ಬಂಧವನ್ನು ಸಡಿಲಗೊಳಿಸಲು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಒಂದು ತಿಂಗಳ ಕಾಲದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದ್ದು, ಮಹೀಂದ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ರಾಜಪಕ್ಸೆ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು.