ನವದೆಹಲಿ : ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಶನಿವಾರ ಆರೋಪಿಸಿದ್ದಾರೆ.
ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಸಂಸತ್ತಿನಲ್ಲಿ ಮಾಡಿದ ಭಾಷಣದ ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
”ಸಂಸತ್ತಿನ ಒಳಗೆ ಅಥವಾ ಹೊರಗೆ ವಾಕ್ ಸ್ವಾತಂತ್ರ್ಯವಿಲ್ಲ. ಯಾರಾದರೂ ಸತ್ಯವನ್ನು ಮಾತನಾಡಿದರೆ, ಅದರ ಬಗ್ಗೆ ಬರೆದರೆ, ತೋರಿಸಿದವರನ್ನು ಬಿಜೆಪಿಯವರು ಕಂಬಿ ಹಿಂದೆ ಕಳುಹಿಸುತ್ತಾರೆ ”ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರಿಗೆ ದುರಹಂಕಾರವಿದೆ
ತೀವ್ರ ವಾಗ್ದಾಳಿ ನಡೆಸಿ ಪ್ರಧಾನಿ ಮೋದಿಯವರಲ್ಲಿ ದುರಹಂಕಾರ ಬಂದಿದೆ, ಆದರೆ ಯಾರ ಅಹಂಕಾರವೂ ಉಳಿಯುವುದಿಲ್ಲ. ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. 2014ರಲ್ಲಿ ಮೋದಿಯವರು ನನ್ನ ಸರಕಾರ ಬಂದ ಮೇಲೆ ಹಣದುಬ್ಬರ ತಗ್ಗಿಸುತ್ತೇನೆ ಎಂದು ಹೇಳುತ್ತಿದ್ದರು. ನಾನು ಪ್ರಧಾನಿ ಮೋದಿಯವರನ್ನು ಕೇಳುತ್ತೇನೆ, ನೀವು ಈಗ ಎಲ್ಲಿದ್ದೀರಿ ಎಂದು ಪ್ರಶ್ನಿಸಿದರು.
ಜಾರ್ಖಂಡ್ ಸರಕಾರವನ್ನು ಹೊಗಳಿ, ”ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ರೈತರ ಪರ ಹೋರಾಟ ಮಾಡುತ್ತೇವೆ”ಎಂದರು.