Advertisement

ದೂರವಾಗದ ಆತಂಕ; ಮೂರು ಶಾಲೆಗಳಿಗಿಲ್ಲ ಸ್ವಾತಂತ್ರ್ಯ!

09:37 AM Aug 17, 2019 | Team Udayavani |

ಸುಳ್ಯ: ಇಂದಿಗೆ ಒಂದು ವರ್ಷದ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಚೂರು ಚೂರಾಗಿದ್ದ ಜೋಡುಪಾಲ ಪರಿಸರವೀಗ ಶಾಂತವಾಗಿದ್ದರೂ ನಾಳೆ ಏನಾಗಬಹುದು ಎಂಬ ಆತಂಕ ಜನರಿಂದ ಇನ್ನೂ ದೂರವಾಗಿಲ್ಲ!

Advertisement

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಜೋಡುಪಾಲದಲ್ಲಿ ಕಳೆದ ವರ್ಷದ ಆ. 16ರಂದು ಬೀಭತ್ಸ ರೂಪ ಪಡೆದು ಅನಾಹುತ ಸೃಷ್ಟಿಸಿದ್ದ ತೊರೆ ಈ ವರ್ಷ ತನ್ನ ಪಾಡಿಗೆ ತಾನು ಶಾಂತವಾಗಿ ಹರಿಯುತ್ತಿದೆ. ತೊರೆ ಸೃಷ್ಟಿಸಿದ ಭೀಕರತೆ ಛಾಯೆ ಇನ್ನೂ ಉಳಿದುಕೊಂಡಿದೆ.

ಸನಿಹದ ಎರಡನೇ ಮೊಣ್ಣಂಗೇರಿ, ಕಾಲೂರು, ಹೆಬ್ಬೆಟ್ಟಗೇರಿ ಸರಕಾರಿ ಶಾಲೆಗಳಲ್ಲಿ ಈ ಬಾರಿ ಸ್ವಾತಂತ್ರ್ಯ ಸಂಭ್ರಮ ಇಲ್ಲ. ಶಾಲೆಗಳಿಗೆ ಬೀಗ ಜಡಿದು ವರ್ಷ ಸಂದಿದೆ. ಭೂ ಕುಸಿತದಿಂದ ಹೆತ್ತವರು ಪರಿಹಾರ ಕೇಂದ್ರ ಸೇರಿದ ಕಾರಣ ಶಾಲೆಗೆ ಮಕ್ಕಳು ಬಾರದ ಸ್ಥಿತಿ ಉಂಟಾಯಿತು. ಮಕ್ಕಳಿಲ್ಲದ ಶಾಲೆಯ ಬಾಗಿಲೆಳೆಯುವುದು ಅನಿವಾರ್ಯವಾಯಿತು.

ತೆರೆದ ಅಂಗಡಿ
ಅಂಗಡಿ, ಹೊಟೇಲ್‌ಗ‌ಳಲ್ಲಿ ವ್ಯಾಪಾರ ವಹಿವಾಟು ಮತ್ತೆ ನಡೆಯುತ್ತಿದೆ. ಘನ ವಾಹನ ಸಂಚಾರಕ್ಕೆ ನಿಷೇಧ ಇರುವ ಕಾರಣ ವ್ಯಾಪಾರ ಕುಸಿದಿದೆ ಎನ್ನುತ್ತಾರೆ ಚಡಾವು ಬಳಿಯ ಪುಟ್ಟ ಹೊಟೇಲ್‌ ಮಾಲಕ.

ಪ್ರಯಾಣಿಕರು ತಂಗಲೆಂದು ತಾತ್ಕಾಲಿಕ ನಿಲ್ದಾಣ ಎದ್ದು ನಿಂತಿದೆ. ರಸ್ತೆಯಿಂದ ಕೆಳಭಾಗದ ಲ್ಲಿರುವ ಆರ್‌ಸಿಸಿ ಮನೆ, ತೊರೆ ಉಗ್ರ ಸ್ವರೂಪ ಪಡೆದಿದ್ದ ಸ್ಥಳದಲ್ಲಿದ್ದ ಮನೆ, ಅಂಗಡಿ ದುರಂತಕ್ಕೆ ಸಾಕ್ಷಿಯಾಗಿ ಈಗಲೂ ಇವೆ. ಜೋಡುಪಾಲ, ಎರಡನೇ ಮೊಣ್ಣಂಗೇರಿ ಪ್ರದೇಶದಿಂದ ಜನರನ್ನು ಸುರಕ್ಷಿತವಾಗಿ ಸಾಗಿಸಲು ಉಳಿದಿದ್ದ ಜೋಡುಪಾಲ ಅಳವಡಿಸಿದ್ದ ತೊರೆಗೆ ರಸ್ತೆ ಭಾಗದಿಂದ ಬೇಲಿ ಹಾಕಲಾಗಿದೆ.

Advertisement

ಮಂಜು ಕವಿದ ವಾತಾವರಣ
ಎರಡನೆ ಮೊಣ್ಣಂಗೇರಿ, ಕರ್ತುಜ, ತಾಳತ್‌ಮನೆ ಪ್ರದೇಶದಲ್ಲಿ ಮಧ್ಯಾಹ್ನವೇ ಪೂರ್ತಿ ಮಂಜು ಕವಿದ ವಾತಾವರಣ ಇದೆ. ಹನಿ ಮಳೆ ನಿರಂತರವಾಗಿದೆ. ರಸ್ತೆ ದುರಸ್ತಿ ನಡೆದಿದೆ.

ಬಾಡಿಗೆ ಮನೆಯೇ ಗತಿ
ಸಂತ್ರಸ್ತರಿಗೆ ಮನೆ ನಿರ್ಮಾಣ, ಪುನರ್ವಸತಿ ಕಾಮಗಾರಿ ಪೂರ್ಣಗೊಳ್ಳದಿರುವ ಕಾರಣ ಸಂತ್ರಸ್ತರಿಗೆ ಬಾಡಿಗೆ ಮನೆಯೇ ಗತಿಯಾಗಿದೆ. ಗುಡ್ಡ ಪ್ರದೇಶದಲ್ಲಿರುವ ಮಂದಿ ಮಳೆಯ ಪ್ರಮಾಣ ಗಮನಿಸಿ ಸುರಕ್ಷಿತ ಸ್ಥಳದತ್ತ ತೆರಳುವ ಬಗ್ಗೆ ಯೋಚನೆ ನಡೆಸಿದ್ದಾರೆ. ಕಳೆದ ವರ್ಷ ಕೊಡಗಿನ 48 ಗ್ರಾಮಗಳು ಸಂಕಷ್ಟಕ್ಕೆ ಈಡಾಗಿದ್ದವು. 850 ಕುಟುಂಬಗಳು ಮನೆ ಕಳೆದುಕೊಂಡಿ ದ್ದವು. 20 ಜನರು ಬಲಿಯಾಗಿ 3,500ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದರು. 52 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. 10 ಸಾವಿರ ಕೋ.ರೂ. ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.

ನಾಲ್ವರು ಜಲ ಸಮಾಧಿಯಾಗಿದ್ದರು!
2018 ಆ. 17ರಂದು ಜೋಡುಪಾಲದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಜೋಡು ಪಾಲದ ಗುಡ್ಡ ಭಾಗದಲ್ಲಿ ಮನೆ ಕಟ್ಟಿ ವಾಸಿಸಿದ್ದ ಒಂದೇ ಕುಟುಂಬದ ನಾಲ್ವರು ಜಲ ಸಮಾಧಿಯಾಗಿದ್ದರು. ಜೋಡುಪಾಲ ನಿವಾಸಿ, ಸುಳ್ಯ ಆಸ್ಪತ್ರೆಯ ಡಿ ಗ್ರೂಪ್‌ ನೌಕರ ಬಸಪ್ಪ, ಗೌರಮ್ಮ, ಮೋನಿಶಾ ಹಾಗೂ ಮದೆ ಗ್ರಾಮ ಬೆಟ್ಟತ್ತೂರಿನ ಮಂಜುಳಾ ಬಲಿ ಯಾಗಿದ್ದರು. ಬಸಪ್ಪ, ಮೊನೀಷಾ ಶವಗಳು ಆ. 18 ಮತ್ತು 19ರಂದು ತೋಡಿನಲ್ಲಿ ಪತ್ತೆಯಾಗಿದ್ದವು. ಗೌರಮ್ಮ ಮೃತದೇಹ ವಾರದ ಬಳಿಕ ಸಿಕ್ಕಿತ್ತು. ಮಂಜುಳಾ ಅವರ ಮೃತದೇಹ ಸಿಗದ ಕಾರಣ ಪ್ರತಿರೂಪ ತಯಾರಿಸಿ ಆಕೆಯ ಅಂತ್ಯಕ್ರಿಯೆ ಮಾಡಲಾಗಿತ್ತು.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next