ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಕ್ಕಳೊಂದಿಗೆ ಸಂವಾದ ಮಾಡುವಾಗ ಪುರುಷರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಂತಹ ಚಿಂತನೆಗಳು ನನ್ನ ಮುಂದೆ ಅಥವಾ ಸರಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ನಮಗೆ ಅಧಿಕಾರ ಬಿಟ್ಟು ಕೊಟ್ಟಾಗ ಸಾರಿಗೆ ಸಂಸ್ಥೆಗಳನ್ನು 5,900 ಕೋಟಿ ರೂ. ಸಾಲದಲ್ಲಿ ಮುಳುಗಿಸಿದ್ದಾರೆ. ಹೀಗಾಗಿ ನಿವೃತ್ತ ಹಾಗೂ ಹಾಲಿ ನೌಕರರಿಗೆ ಕೆಲವು ಸೌಲಭ್ಯಗಳನ್ನು ನೀಡಲು ಕಷ್ಟವಾಗಿದೆ. ಅವರ ಅವಧಿಯಲ್ಲಿ ಒಂದೇ ಒಂದು ಬಸ್ ಖರೀದಿ ಮಾಡಲಿಲ್ಲ. ನೇಮಕಾತಿಯೂ ಆಗಲಿಲ್ಲ. ಇದೀಗ ನಮ್ಮ ಸರಕಾರ ಬಂದ ಅನಂತರ ಬಸ್‌ಗಳ ಖರೀದಿ, ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದರು.
ವೇತನ ಪರಿಷ್ಕರಣೆಯೂ ಇಲ್ಲ
ಸಾರಿಗೆ ಸಂಸ್ಥೆಗಳ ನೌಕರರ ಹೊಸ ವೇತನ ಪರಿಷ್ಕರಣೆ ಕುರಿತು ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ. ಇತ್ತೀಚೆಗೆ ಆಗಿರುವ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಕುರಿತು ಚರ್ಚೆಗಳು ನಡೆಯುತ್ತಿವೆ. 2024ಕ್ಕೆ ಯಾವುದೇ ಹೊಸ ವೇತನ ಒಪ್ಪಂದವಿಲ್ಲ. ಇತ್ತೀಚೆಗೆ ಕಾರ್ಮಿಕ ಸಂಘಟನೆಗಳು ಬಂದಾಗ ಈ ಕುರಿತು ಯಾವುದೇ ಚರ್ಚೆ ಮಾಡಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.