ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಆಪೆ¤ ಶಶಿಕಲಾ ನಟರಾಜನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿ ಸೌಲಭ್ಯ ನೀಡಲು 2 ಕೋಟಿ ರೂ. ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿಜಿಪಿ ಎಚ್.ಎನ್ ಸತ್ಯನಾರಾಯಣ ರಾವ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಶುಕ್ರವಾರ ವಿಸ್ತರಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸತ್ಯನಾರಾಯಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಅಥವಾ ಆತುರದ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿ ಆದೇಶಿಸಿತು.
ಪರಪ್ಪನ ಆಗ್ರಹಾರದಲ್ಲಿ ಶಶಿಕಲಾಗೆ ವಿಐಪಿ ಸೌಲಭ್ಯ ಒದಗಿಸಲು 2 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂದು ಆರೋಪಿಸಿ ಆಗ ಡಿಐಜಿಯಾಗಿದ್ದ ಡಿ. ರೂಪಾ, ಡಿಜಿಪಿ ಸತ್ಯನಾರಾಯಣ ವಿರುದ್ಧ ದೂರು ಕೊಟ್ಟಿದ್ದರು. ಈ ಸಂಬಂಧ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ಅವರನ್ನು ಸರ್ಕಾರ ನೇಮಿಸಿತ್ತು. ಬಳಿಕ ವಿನಯ್ ಕುಮಾರ್ ವರದಿ ಆಧರಿಸಿ ತನಿಖೆ ನಡೆಸುವಂತೆ ಪ್ರಕರಣವನ್ನು ಎಸಿಬಿಗೆ ವಹಿಸಲಾಗಿತ್ತು.
ಅದರಂತೆ, ಪ್ರಕರಣ ದಾಖಲಿಸಿಕೊಂಡು ಎಸಿಬಿ ತನಿಖೆ ಮುಂದುವರಿಸಿತ್ತು. ತಮ್ಮ ವಿರುದ್ಧದ ಎಫ್ಐಆರ್, ಎಸಿಬಿ ನಡೆಸುತ್ತಿರುವ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಸತ್ಯನಾರಾಯಣ ರಾವ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಎಸಿಬಿಗೆ ನಿರ್ದೇಶನ ನೀಡಿತ್ತು. ಈ ಆದೇಶವನ್ನೇ ಮುಂದುವರಿಸುವಂತೆ ಪುನಃ ಸೂಚಿಸಿ ವಿಚಾರಣೆ ಮುಂದೂಡಿತು.