Advertisement
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುರತ್ಕಲ್, ಯೆಯ್ನಾಡಿಯ ಬಾರೆಬೈಲ್ ಮತ್ತು ಶಿರ್ಲಾಲಿನ ಒಟ್ಟು ಮೂವರು ಮಹಿಳೆಯರು ಮತ್ತು ಎರಡು ದಿನಗಳ ಹಿಂದೆ ಮೃತಪಟ್ಟ ಬೆಳ್ತಂಗಡಿಯ ವ್ಯಕ್ತಿಗೆ ಸೋಂಕು ಹರಡಿದ್ದೆಲ್ಲಿಂದ ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಕಾರ್ಕಳದ ಗರ್ಭಿಣಿ ಮತ್ತು ಉಡುಪಿ ಜಿ.ಪಂ. ಸಿಬಂದಿಗೆ ಹೇಗೆ ಸೋಂಕು ತಗಲಿದ್ದೆಂದು ಗೊತ್ತಾಗಿಲ್ಲ.
ಸೋಂಕುಪೀಡಿತರ ಸಂಪರ್ಕವಿಲ್ಲದವರಿಗೂ ಕೋವಿಡ್ ಹರಡುತ್ತಿರುವುದನ್ನು ಗಮನಿಸಿದರೆ ಅದೀಗ ಸಾಮುದಾಯಿಕ ಪ್ರಸರಣದ ಹಂತ ತಲುಪಿದೆಯೇ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ. ಇಂತಹ ಹರಡುವಿಕೆಗೆ ಪೂರಕ ಎಂಬಂತೆ ಎರಡೂ ಜಿಲ್ಲೆಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ಮುನ್ನೆಚ್ಚರಿಕೆಯ ಕ್ರಮಗಳನ್ನು ಮರೆಯುತ್ತಿರುವುದು ಮತ್ತು ನಿರ್ಲಕ್ಷಿಸುತ್ತಿರುವುದು ಹೆಚ್ಚಾಗುತ್ತಿದೆ. ಕಾನೂನು ಕ್ರಮದ ಹೆದರಿಕೆಯೂ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಸಂಚರಿಸಿದರೆ ನಗರ ಪ್ರದೇಶಗಳಲ್ಲಿ 200 ರೂ. ದಂಡ, ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಿಧಿಸುವುದಾಗಿ, ಕ್ವಾರಂಟೈನ್ ನಿಯಮ ಉಲ್ಲಂ ಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ದ.ಕ. ಜಿಲ್ಲೆಯಲ್ಲಿ ಸುಮಾರು 650 ಹಾಗೂ ಉಡುಪಿ ಜಿಲ್ಲೆಯಲ್ಲಿ 700 ಮಂದಿಗೆ ದಂಡ ವಿಧಿಸಲಾಗಿದೆ.
Related Articles
ಸದ್ಯ ಲಾಕ್‌ಡೌನ್ ಸಡಿಲಿಕೆಯಾಗಿದೆ. ಆದರೆ ಸೋಂಕುಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸಾಮುದಾಯಿಕ ಪ್ರಸರಣದ ಹಂತ ತಲುಪಿರುವ ಅನುಮಾನವನ್ನು ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ತಳ್ಳಿ ಹಾಕುತ್ತಾರೆ. ಆದರೆ ಈಗ ಜನರೇ ಸೋಂಕು ಮುಂದಿನ ಹಂತ ಪ್ರವೇಶಿಸದಂತೆ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕಿದೆ. ಜಿಲ್ಲಾಡಳಿತ ಕಾರ್ಯ ನಿರತವಾಗಿದ್ದರೂ ಅದು ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ವಿಟ್ಲ ಪೊಲೀಸ್ ಠಾಣೆಯ ಸಿಬಂದಿಗೆ ಸೋಂಕು ಹರಡಿದ್ದನ್ನು ಗಮನಿಸಬಹುದು. ಈ ಪ್ರಕರಣದಲ್ಲಿ ಸೋಂಕುಪೀಡಿತನ ಆಧಾರ್ ಕಾರ್ಡ್ ಮುಟ್ಟಿದ ಪೊಲೀಸ್ ಸಿಬಂದಿಯು ಬಳಿಕ ಇನ್ನೋರ್ವ ಸಿಬಂದಿಗೆ ತನ್ನ ಮೊಬೈಲ್ ಫೋನ್ ನೀಡಿದ್ದರು. ಆಧಾರ್ ಕಾರ್ಡ್ ಮುಟ್ಟಿದ ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ, ಆದರೆ ಅವರ ಮೊಬೈಲ್ ಬಳಸಿದ ಇನ್ನೊಬ್ಬ ಸಿಬಂದಿಗೆ ಸೋಂಕು ತಗಲಿದೆ. ಇದನ್ನು ಗಮನಿಸಿದರೆ ಕೊರೊನಾ ಎಲ್ಲಿಂದ, ಹೇಗೆ ಹರಡುತ್ತದೆ ಎಂಬುದೇ ಗೊತ್ತಾಗದಷ್ಟು ಅಪಾಯ ಆಳದಲ್ಲಿದೆ. ಹೀಗಾಗಿ ಸಾಧ್ಯವಾದಷ್ಟು ಎಚ್ಚರ ವಹಿಸುವುದೇ ಈಗಿರುವ ದಾರಿ.
Advertisement
ಸಭೆಗಳಲ್ಲೇ ನಿಯಮ ಉಲ್ಲಂಘನೆಮಾಸ್ಕ್ ಧರಿಸದಿರುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಇಲ್ಲದಿರುವ ಪ್ರಸಂಗಗಳು ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುವ ಕಾರ್ಯಕ್ರಮ, ಸಭೆಗಳಲ್ಲೇ ಕಂಡು ಬರುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ನಾವು ಕಚೇರಿಯ ಒಳಗೆ ಇದ್ದೇವೆ ಎಂದು ಮಾಸ್ಕ್ ಧರಿಸಬೇಕಾಗಿಲ್ಲ ಎಂಬ ಅಭಿಪ್ರಾಯ ಕೆಲವರದ್ದಾದರೆ, ಹಲವು ಮಂದಿ ಪಾಲ್ಗೊಳ್ಳುವ ಸಭೆ, ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಷ್ಟವಾಗಬಹುದು ಎಂಬ ಅಭಿಪ್ರಾಯ ಉಳಿದವ ರಲ್ಲಿರಬಹುದು. ಆದರೆ ನಿಯಮ ಪಾಲಿಸುವಂತೆ ಹೇಳುವವರೇ ಉಲ್ಲಂಘಿಸಿದ ಉದಾಹರಣೆಯೂ ಉಳಿದವರೂ ಗಂಭೀರವಾಗಿ ತೆಗೆದುಕೊಳ್ಳದಂತೆ ಮಾಡುತ್ತಿದೆ ಎಂಬುದು ಜನಾಭಿಪ್ರಾಯ. ಸೋಂಕು ಪೀಡಿತರ ಸಂಪರ್ಕಿತರಲ್ಲದ 4 ಪ್ರಕರಣಗಳ ಬಗ್ಗೆ ಏಕಾಏಕಿ ನಿರ್ಧಾರಕ್ಕೆ ಬರಲಾಗುವುದಿಲ್ಲ. ಸಾಮುದಾಯಿಕ ಹರಡುವಿಕೆಯ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ಮುಂದೆ ಅಲ್ಲಗಳೆಯುವಂತಿಲ್ಲ.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲೆಯ 2 ಪ್ರಕರಣಗಳ ಮೂಲ ತಿಳಿಯುತ್ತಿಲ್ಲ. ಇವರು ಸಂಪರ್ಕ ತಿಳಿಸುತ್ತಿಲ್ಲ. ಸಂಪರ್ಕವನ್ನು ಹೊಂದದೆ ಸೋಂಕು ತಗಲಿದರೆ ಸಾಮುದಾಯಿಕವಾಗಿ ಹರಡುತ್ತಿದೆಯೇ ಎಂಬ ಸಂಶಯ ಮೂಡುತ್ತದೆ.
– ಡಾ| ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಮಾಸ್ಕ್ ಧರಿಸದವರು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶಿಸುತ್ತೇನೆ.
– ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ