ಹಳಿಯಾಳ: ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರದ ದಾಸ್ತಾನು ಮಾಡಿಕೊಳ್ಳಲಾಗಿದೆ ಹಾಗೂ ರೈತರಿಗೆ ವಿತರಣೆಯಾಗುತ್ತಿರುವ ಕಾರಣ ರಸಗೊಬ್ಬರದ ಅಭಾವ ಇಲ್ಲವೆಂದು ಹಳಿಯಾಳ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿಯಮಗಳ ಅನುಸಾರ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಾಯಧನದಡಿ ಪಿಒಎಸ್ ಯಂತ್ರದ ಮೂಲಕ ಆಧಾರ್ ಕಾರ್ಡ್ ಹಾಗೂ ಹೆಬ್ಬೆರಳ ಗುರುತು ಪಡೆದುರಸಗೊಬ್ಬರವನ್ನು ವಿತರಿಸಲಾಗುತ್ತಿದೆ. ಆದರೆ ಈ ಭಾಗದ ರೈತರು ಅತಿಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರವನ್ನುಬಳಕೆ ಮಾಡುತ್ತಿರುವ ಕಾರಣ ರೈತರಿಗೆ ಯೂರಿಯಾ ಕೊರತೆ ಇದೆ ಎಂದು ಹೇಳುತ್ತಿದ್ದಾರೆ.
ಆದರೆ ರಸಗೊಬ್ಬರ ಕೊರತೆ ತಾಲೂಕಿನಲ್ಲಿ ಇಲ್ಲ. ಬೀಜ ಬಿತ್ತನೆ ಕಾರ್ಯದಿಂದ ಬೆಳವಣಿಗೆ ಹಂತದವರೆಗೂ ವಿವಿಧ ತರಹದ ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬೆಳೆಗಳಿಗೆ ನೀಡಬೇಕಾಗುತ್ತದೆ. ಆದರೆ ಸ್ಥಳೀಯ ರೈತರು ಯೂರಿಯಾ ಗೊಬ್ಬರವನ್ನು ಹೆಚ್ಚಿನ ಪ್ರಮಾಣ ಬಳಸುತ್ತಿರುವುದು ಕೃಷಿ ಪದ್ಧತಿಯಲ್ಲಿ ಯೋಗ್ಯವಲ್ಲ ಎಂದರು.
ತಾಲೂಕಿನ ಮಣ್ಣು ಹುಳಿಯಿಂದ ಕೂಡಿದ್ದು ಸುಣ್ಣ ಹಾಗೂ ಇನ್ನಿತರ ಲಘು ಪೋಷಕಾಂಶಗಳ ಅವಶ್ಯಕತೆ ಇರುವುದನ್ನು ಮಣ್ಣು ತಜ್ಞರೂ ತಿಳಿಸಿದ್ದು, ಅದರಂತೆ ಜಿಂಕ್ ಬೋರಾನ್ ಸುಣ್ಣ ಹಾಗೂ ಇನ್ನಿತರಲಘು ಪೋಷಕಾಂಶಗಳನ್ನು ನೀಡುವಂತೆ ಸರಕಾರವೇ ಆದೇಶ ಜಾರಿ ಮಾಡಿದ್ದು, ರೈತರು ಇಂತಹ ಮಾಹಿತಿಗಳನ್ನು ಅರ್ಥ ಮಾಡಿಕೊಂಡು ಬೇಸಾಯ ಮಾಡಿದರೆ ಉತ್ತಮ ಫಸಲು ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಮೇಲಿಂದ ಮೇಲೆ ರಸಗೊಬ್ಬರ ಮಾರಾಟಗಾರರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿರುವ ಕಾರಣ ಕೃತಕ ಅಭಾವ ಸೃಷ್ಟಿಸಲು ಸಾಧ್ಯವಿಲ್ಲ. ಇಷ್ಟಾಗ್ಯೂ ರೈತರ ದೂರುಗಳಿದ್ದರೆ ನೇರವಾಗಿ ಪೊಲೀಸ್, ತಹಶೀಲ್ದಾರ್ ಇಲ್ಲವೇ ಕೃಷಿ ಇಲಾಖೆಗೆ ದೂರು ನೀಡುವಂತೆ ಮಾನೆ ಮನವಿ ಮಾಡಿದರು.
ಸರ್ಕಾರದ ಆದೇಶದಂತೆ ಯೂರಿಯಾ ಗೊಬ್ಬರ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಲಘು ಪೋಷಕಾಂಶಗಳಾದ ಜಿಂಕ್ ಬೋರಾನ್ ಹಾಗೂ ಇನ್ನಿತರ ಗೊಬ್ಬರಗಳನ್ನು ವಿತರಣೆ ಮಾಡಲೇಬೇಕಾಗುತ್ತದೆ ಎಂದ ಅವರು, ಪ್ರತಿ ಎಕರೆಗೆ ಯೂರಿಯಾ ಗೊಬ್ಬರದ ಬಳಕೆಯನ್ನು ಕಬ್ಬು -250 ಕೆಜಿ ಹತ್ತಿ ಹಾಗೂ ಮೆಕ್ಕೆಜೋಳ -150 ರಿಂದ 200 ಕೆಜಿ, ಭತ್ತ-100 ರಿಂದ 150 ಮಾಡಬೇಕೆಂದು ಮಾಹಿತಿ ನೀಡಿದರು.