ಸಹರಾನ್‌ಪುರ: ತಮ್ಮ ಸರಕಾರದ ಅಡಿಯಲ್ಲಿ ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಮತ್ತು ರಾಜ್ಯವು ಈಗ ಮಹಾ ಉತ್ಸವಗಳಿಂದ ಗುರುತಿಸಲ್ಪಟ್ಟಿದೆಯೇ ಹೊರತು ಮಾಫಿಯಾಕ್ಕಾಗಿ ಅಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.
ಸೋಮವಾರ ಸಹರಾನ್‌ಪುರದಿಂದ ಮುಂಬರುವ ನಗರ ಪಾಲಿಕೆ ಚುನಾವಣೆಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ತಮ್ಮ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿ, ಹಿಂದಿನ ಸರ್ಕಾರಗಳು ಗಲಭೆಗಳನ್ನು ಪ್ರಚೋದಿಸುವಲ್ಲಿ ನಿರತವಾಗಿದ್ದವು ಎಂದು ಆರೋಪಿಸಿದರು.
ಇಂದು ರಾಜ್ಯದ ಗುರುತು ಹಬ್ಬಗಳೇ ಹೊರತು ಮಾಫಿಯಾ ಮತ್ತು ಅವ್ಯವಸ್ಥೆಗಳಲ್ಲ ಎಂದರು.
ಸ್ಥಳೀಯರ ಭಾರೀ ಕರತಾಡನದ ನಡುವೆ ಮುಖ್ಯಮಂತ್ರಿಗಳು ಉತ್ತರ ಪ್ರದೇಶ ಯಾರ ಸ್ವತ್ತೂ ಅಲ್ಲ, ಸುಲಿಗೆಗೆ ಅವಕಾಶ ನೀಡುವುದಿಲ್ಲ ಎಂದರು. ಉತ್ತರ ಪ್ರದೇಶದಲ್ಲಿ ಈಗ ಯಾವುದೇ ಗಲಭೆ ಮತ್ತು ಕರ್ಫ್ಯೂ ಇಲ್ಲ ಮತ್ತು ಎಲ್ಲವೂ ಚೆನ್ನಾಗಿದೆ ಎಂದರು.
ಹಿಂದಿನ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, 2017 ರ ಮೊದಲು ಇಲ್ಲಿನ ಸರಕಾರಗಳಿಗೆ ಗಲಭೆಗಳನ್ನು ಸೃಷ್ಟಿಸುವುದನ್ನು ಬಿಟ್ಟು ಬೇರೆ ಯಾವುದಕ್ಕೂ ಸಮಯವಿರಲಿಲ್ಲ ಆದರೆ ಇಂದು ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಇಲ್ಲ. ಈಗ ಕನ್ವರ್ ಯಾತ್ರೆ ಹೊರಟಿದೆ. ಈ ಹಿಂದೆ ಯುವಕರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು ಆದರೆ ಈಗ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ.ಹಿಂದೆ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಆದರೆ, ಇಂದು ಉತ್ತರ ಪ್ರದೇಶದಲ್ಲಿ ಭಯಮುಕ್ತ ವಾತಾವರಣವಿದೆ” ಎಂದರು.