Advertisement
ಇಲ್ಲಿ ಒಂದಷ್ಟು ಗೊಂದಲಗಳಿವೆ, ತಕ್ಕಷ್ಟು ಬೆಚ್ಚಿಬೀಳಿಸುವ ಅಂಶಗಳಿವೆ. ಹಾಗಂತ, ಭಯಾನಕವಾದದ್ದೇನಾದರೂ ಇದೆಯಾ ಎಂಬ ಕುತೂಹಲವಿದ್ದರೆ, ಹಾಗೊಮ್ಮೆ “ಅಮವಾಸೆ’ ಕಗ್ಗತ್ತಲಲ್ಲಿ ಸುತ್ತಾಡಿಬರಬಹುದು. ಆರಂಭದಲ್ಲಿ ತೆರೆಯ ಮೇಲೆ ಏನೆಲ್ಲಾ ನಡೆಯುತ್ತಿದೆ ಎಂಬ ಗೊಂದಲದಲ್ಲೇ ಚಿತ್ರ ಸಾಗುತ್ತದೆಯಾದರೂ, ಮೊದಲರ್ಧ ಗೊಂದಲದ ಪ್ರಶ್ನೆಗೆ ದ್ವಿತಿಯಾರ್ಧದ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಉತ್ತರ ಸಿಗುತ್ತದೆ.
Related Articles
Advertisement
ಇಲ್ಲೂ ದ್ವೇಷ ಸಾಧಿಸುವ ದೆವ್ವ ಇದೆ. “ನಾಗವಲ್ಲಿ’ ರೀತಿ “ಭರತನಾಟ್ಯ’ದ ಕಾಸ್ಟೂಮ್ ಧರಿಸಿ ಹಾಡಿ, ಕುಣಿದು ಕಿರುಚಾಡುವ ಸಣ್ಣ ತಾಕತ್ತೂ ಅದಕ್ಕಿದೆ. ಅದೆಲ್ಲದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಚಿತ್ರದ ದೆವ್ವ, ಆ ನಾಲ್ವರು ಹುಡುಗರ ಮೊಬೈಲ್‌ಗೆ “ರಕ್ತ ಬೇಕು’ ಎಂಬ ಮೆಸೇಜ್ ಮಾಡುತ್ತೆ!! ಅಲ್ಲಿಗೆ ದೆವ್ವ ಕೂಡ ಟೆಕ್ನಾಲಜಿಯಲ್ಲಿ ಮುಂದುವರೆದಿದೆ ಅನ್ನುವುದನ್ನು ತೋರಿಸಿರುವ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು.
ಎಲ್ಲೋ ಒಂದು ಕಡೆ ಲಿಂಕ್‌ಗಳನ್ನು ಸರಿಯಾಗಿ ಕೊಟ್ಟಿದ್ದರೆ, ದೃಶ್ಯಗಳಿಗೊಂದಷ್ಟು ಅರ್ಥ ಕಲ್ಪಿಸಿದ್ದರೆ, ಕಂಟಿನ್ಯುಟಿಯತ್ತ ಗಮನಹರಿಸಿದ್ದರೆ, “ಅಮವಾಸೆ’ ಒಂದು ಭಯಾನಕವಾಗಿ ಬೆಚ್ಚಿಬೀಳಿಸುವ ಚಿತ್ರವಾಗುತ್ತಿತ್ತು. ಆದರೂ, ಒಂದೇ ಒಂದು ಸಣ್ಣ ಸಂದೇಶವನ್ನಿಟ್ಟುಕೊಂಡು ಎರಡು ಗಂಟೆ ಕಾಲ ಹೆದರಿಸುವ ಪ್ರಯತ್ನದ ಶ್ರಮ ಎದ್ದು ಕಾಣುತ್ತೆ. ಅಮರ್, ಮಹೇಶ್, ವಾಸು, ಸೆಂದಿ ಈ ನಾಲ್ವರು ಗೆಳೆಯರಿಗೆ ಕರ್ಣ ಎಂಬ ಪ್ರಾಣಸ್ನೇಹಿತನಿರುತ್ತಾನೆ.
ಬಾಲ್ಯದಲ್ಲಿ ತನ್ನ ಪ್ರಾಣ ಉಳಿಸಿದ ನಾಲ್ವರು ಗೆಳೆಯರಿಗೆ ಕರ್ಣ ತನ್ನ ಪ್ರಾಣ ಕೊಡಲು ಕೂಡ ರೆಡಿ. ಅಂತಹ ಕರ್ಣ ಕನಕ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ. ಆಕೆಗೆ ಕರ್ಣನ ಗೆಳೆಯರೆಂದರೆ ಆಗಲ್ಲ. ಕಾರಣ, ಸದಾ ಗೆಳೆಯರ ಬಗ್ಗೆ ಚಿಂತಿಸುವ ಕರ್ಣ, ಮುಂದೆ ತನ್ನ ಮೇಲಿನ ಪ್ರೀತಿಯನ್ನೆಲ್ಲಿ ಕಡಿಮೆ ಮಾಡುತ್ತಾನೋ ಎಂಬ ಆತಂಕ. ಒಮ್ಮೆ ಗೆಳೆಯರನ್ನು ನೋಡಲು ಮಡಿಕೇರಿಯಿಂದ ಮೈಸೂರಿಗೆ ತೆರಳುವ ಕರ್ಣ, ಅಲ್ಲೇ ಕಾಲಕಳೆಯುತ್ತಿರುತ್ತಾನೆ.
ಅತ್ತ ಕನಕ ಕರ್ಣನನ್ನು ನೋಡಲು ಮಡಿಕೇರಿಯಿಂದ ಕಾರು ಚಲಾಯಿಸಿಕೊಂಡು ಬರುವಾಗ, ದಾರಿ ಮಧ್ಯೆ ಅಪಘಾತವಾಗುತ್ತೆ. ಆ ಸಮಯದಲ್ಲಿ ಕರ್ಣನ ಗೆಳೆಯರಿದ್ದರೂ, ಅವಳನ್ನು ಕಾಪಾಡೋಕೆ ಮುಂದಾಗಲ್ಲ. ಆಕೆ ಅಲ್ಲೇ ಪ್ರಾಣ ಬಿಡುತ್ತಾಳೆ. ಅತ್ತ, ಕರ್ಣ ತನ್ನ ಪ್ರೇಯಸಿ ಸತ್ತಳೆಂದು ಆತ್ಮಹತ್ಯೆಗೆ ಶರಣಾಗುತ್ತಾನೆ. ಆಮೇಲೆ ಆ ನಾಲ್ವರಿಗೂ ಒಂದು ಭೀತಿ ಶುರುವಾಗುತ್ತೆ. ತಮ್ಮಿಬ್ಬರ ಅಗಲಿಕೆಗೆ ಆ ನಾಲ್ವರು ಕಾರಣ ಅಂತ ಕನಕಳ ಆತ್ಮ ಅವರನ್ನು ಸಾಯಿಸಲು ಹಠ ಸಾಧಿಸುತ್ತೆ. ಮುಂದೇನಾಗುತ್ತೆ ಅನ್ನೋದೇ ಕಥೆ.
ರಾಜೀವ್ ಸಿಕ್ಕ ಪಾತ್ರವನ್ನು ಇನ್ನೂ ಚೆನ್ನಾಗಿ ನಿಭಾಯಿಸಬಹುದಿತ್ತು. ಅವರ ಡೈಲಾಗ್‌ಗೂ ಬಾಡಿಲಾಂಗ್ವೇಜ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಧರಣಿ ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಮಿಕ್ಕಂತೆ ತಕ್ಕಮಟ್ಟಿಗೆ ಗಮನಸೆಳೆಯುತ್ತಾರೆ. ಉಳಿದಂತೆ ರಾಘವ, ಲೋಕೇಶ್, ವಿನಯ್, ಅಭಯ್ ನಿರ್ದೇಶಕರ ಕಲ್ಪನೆಗೆ ಮೋಸ ಮಾಡಿಲ್ಲ. ಅನಂತವೇಲು ಬಾಬಾ ಭಕ್ತರಾಗಿ ದೆವ್ವಕ್ಕೊಂದು ಮುಕ್ತಿ ಕೊಡುವ ಪಾತ್ರ ನಿರ್ವಹಿಸಿದ್ದಾರೆ. ಹರಿಬಾಬು ಸಂಗೀತಕ್ಕಿನ್ನೂ ಹೆದರಿಸುವ ಗುಣ ಬೇಕಿತ್ತು. ಆನಂದ ಇಳಯರಾಜ್ ಛಾಯಾಗ್ರಹಣದಲ್ಲಿ “ಅಮವಾಸೆ’ ಆವರಿಸಿಕೊಂಡಿದೆ.
ಚಿತ್ರ: ಅಮವಾಸೆನಿರ್ದೇಶನ: ಪ್ರಶಾಂತ್
ನಿರ್ಮಾಣ: ಡಾ.ಚಂದ್ರಶೇಖರ್, ಜಗದೀಶ್
ತಾರಾಗಣ: ರಾಜೀವ್, ಧರಣಿ, ರಾಘವ, ಲೋಕೇಶ್, ವಿನಯ್, ಅಭಯ್, ಅನಂತವೇಲು ಇತರರು. * ವಿಜಯ್ ಭರಮಸಾಗರ