Advertisement

ರೈತರ ಆತ್ಮಹತ್ಯೆಯ ದತ್ತಾಂಶವೇ ಇಲ್ಲ!

06:00 AM Dec 21, 2018 | |

ಹೊಸದಿಲ್ಲಿ: ಸಾಲ ಮನ್ನಾ ಹೆಸರಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುತ್ತಿರುವಂಥ ಈ ಸಂದರ್ಭದಲ್ಲಿ ಕೇಂದ್ರ ಸರಕಾರವು, ದೇಶದ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶವೇ ಇಲ್ಲ ಎಂದು ಹೇಳಿದೆ. 

Advertisement

ಕಳೆದ 3 ವರ್ಷಗಳಲ್ಲಿ ದೇಶದಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ, “2016ರಿಂದ ಇಲ್ಲಿಯವರೆಗೆ ರೈತರ ಆತ್ಮಹತ್ಯೆ ಕುರಿತ ದತ್ತಾಂಶ ಲಭ್ಯವಿಲ್ಲ’ ಎಂಬ ಉತ್ತರವನ್ನು ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ನೀಡಿದ್ದಾರೆ.

ಲೋಕಸಭೆಯಲ್ಲಿ ಈ ಉತ್ತರ ನೀಡಿದ ಸಿಂಗ್‌, ಇಂಥ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಸಂಗ್ರಹಿಸುತ್ತದೆ. ಆದರೆ 2016ರಿಂದ ಎನ್‌ಸಿಆರ್‌ಬಿ ಈ ಕುರಿತು ವರದಿಯನ್ನೇ ನೀಡಿಲ್ಲ ಎಂದಿದ್ದಾರೆ. ಪ್ರತಿ ವರ್ಷ ಎನ್‌ಸಿಆರ್‌ಬಿ “ಭಾರತದಲ್ಲಿನ ಆಕಸ್ಮಿಕ ಮರಣಗಳು ಹಾಗೂ ಆತ್ಮಹತ್ಯೆಗಳು’ ಎಂಬ ಶೀರ್ಷಿಕೆಯಡಿ ವರದಿಯನ್ನು ಸಲ್ಲಿಸುತ್ತದೆ. 2015ರ ವರದಿ ಪ್ರಕಾರ, ದೇಶದಲ್ಲಿ 8 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪೈಕಿ ಕರ್ನಾಟಕದ 1,197 ರೈತರೂ ಇದ್ದರು.

ಎರಡು ವಿಧೇಯಕ ಅಂಗೀಕಾರ: ಗ್ರಾಹಕರ ಹಕ್ಕುಗಳನ್ನು ಬಲಿಷ್ಠಗೊಳಿಸುವ ಮತ್ತು ಸರಕುಗಳಲ್ಲಿನ ದೋಷಗಳು, ಸೇವೆಗಳಲ್ಲಿನ ಕೊರತೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ಸೌಲಭ್ಯವಿರುವಂಥ “ಗ್ರಾಹಕ ರಕ್ಷಣಾ ವಿಧೇಯಕ 2018’ಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಜತೆಗೆ, ಆಟಿಸಂ, ಸೆರೆಬ್ರಲ್‌ ಪಾಲ್ಸಿ, ಮಾನಸಿಕ ಅಸ್ವಸ್ಥತೆ ಮತ್ತು ಬಹು ಅಸಮರ್ಥತೆ (ತಿದ್ದುಪಡಿ) ಯುಳ್ಳ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ವಿಧೇಯಕವೂ ಗುರುವಾರ ಅಂಗೀಕಾರ ಗೊಂಡಿದೆ. ಉಭಯ ಸದನಗಳಲ್ಲಿ ಕಾವೇರಿ, ರಫೇಲ್‌ ವಿವಾದ ಕುರಿತು ಪ್ರತಿ ಪಕ್ಷಗಳ ಗದ್ದಲಗಳ ನಡುವೆಯೇ ಅಂಗೀಕಾರ ಸಿಕ್ಕಿದೆ. ಕೊನೆಗೆ, ಎರಡೂ ಸದನಗಳ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. 

27ರಂದು ತ್ರಿವಳಿ ತಲಾಖ್‌ ಚರ್ಚೆ
ಡಿ.27ರಂದು ತ್ರಿವಳಿ ತಲಾಖ್‌ ವಿಧೇ ಯಕಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಸ್ಲಿಂ ಮಹಿಳೆ ಯರ (ವಿವಾಹಕ್ಕೆ ಸಂಬಂಧಿಸಿದ ಹಕ್ಕು ಗಳ ರಕ್ಷಣೆ) ವಿಧೇಯಕದ ಕುರಿತು ಮುಂದಿನ ವಾರ ಚರ್ಚೆ ನಡೆಯಲಿ ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದು, ಇದಕ್ಕೆ ಒಪ್ಪಿಗೆ ನೀಡಲಾಗಿದೆ.

Advertisement

ಸಾಲ ಮನ್ನಾ ಮಾಡಿದ ಕೂಡಲೇ ರೈತರ ಸಂಕಷ್ಟ ಪರಿಹಾರವಾಗುವುದಿಲ್ಲ. ರೈತರನ್ನು ಅಲ್ಪಸಂಖ್ಯಾತ ವೋಟ್‌ಬ್ಯಾಂಕ್‌ನಂತೆ ನೋಡಬೇಡಿ.
– ಮೋಹಿನಿ ಮೋಹನ್‌, ಭಾರತೀಯ ಕಿಸಾನ್‌ ಸಂಘದ ರಾಷ್ಟ್ರೀಯ ಕಾರ್ಯದರ್ಶಿ
 

Advertisement

Udayavani is now on Telegram. Click here to join our channel and stay updated with the latest news.

Next