ಬೈಲಹೊಂಗಲ: ಕಾಲ ಕಾಲಕ್ಕೆ ಹಳೆಯ ಶಾಲಾ, ಕಾಲೇಜುಗಳನ್ನು ದುರಸ್ತಿಗೊಳಿಸಿ, ಪ್ರಾಧ್ಯಾಪಕರ ನೇಮಕ ಮಾಡಿ ಮಕ್ಕಳಿಗೆ ಉತ್ತಮ ವಾತಾವರಣ ಒದಗಿಸುವುದು ಸರಕಾರದ ಕೆಲಸ. ಆದರೆ ಇಲ್ಲೊಂದು ಸರಕಾರಿ ಪಿಯು ಕಾಲೇಜು ಮೂಲ ಸೌಕರ್ಯಗಳಿಂದ ವಂಚಿತವಾಗಿ ದುಸ್ಥಿತಿ ತಲುಪಿರುವುದು ದುರಂತ.
ತಾಲೂಕಿನ ವನ್ನೂರ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಅಂಥ ನಿರ್ಲಕ್ಷ್ಯದ ಸ್ಥಿತಿಗೆ ತಲುಪಿದೆ. ಇಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಸುಮಾರು 40 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ತಲಾ 20 ವಿದ್ಯಾರ್ಥಿಗಳು ಇದ್ದರೂ ಉಪನ್ಯಾಸಕರದೇ ಕೊರತೆ.
ಇಲ್ಲಿ ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ ವಿಷಯದಲ್ಲಿ ಇಬ್ಬರು ಉಪನ್ಯಾಸಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ ಪೂರ್ಣಾವಧಿ ಉಪನ್ಯಾಸಕರು, ಪೂರ್ಣಾವಧಿ ಪ್ರಾಚಾರ್ಯ, ಗುಮಾಸ್ತ, ಜವಾನ ಕಾರ್ಯನಿರ್ವಹಿಸುವರು. ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗಿದೆ. ಎಸ್‌ಡಿಎಂಸಿ ರಚನೆ ಇಲ್ಲದಿರುವುದರಿಂದ ಕಾಲೇಜಿಗೆ ಯಾರೂ ದಿಕ್ಕಿಲ್ಲದ ಸ್ಥಿತಿ ಅನುಭವಿಸುತ್ತದೆ. ಇನ್ನಾದರೂ ಹೆಚ್ಚಿನ ಉಪನ್ಯಾಸಕರು, ಸಿಬ್ಬಂದಿ ನೇಮಕ ಮಾಡಿ, ಸೌಕರ್ಯ ಒದಗಿಸಲು ಆದ್ಯತೆ ನೀಡಬೇಕಿದೆ.
ಕೊಠಡಿಗಳೆಲ್ಲ ಧೂಳುಮಯ: ಇಲ್ಲಿ ನಿರ್ಮಿಸಲಾದ ಎಲ್ಲ ಕೊಠಡಿಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಂಡಿಲ್ಲ. ಇದ್ದ ಕೊಠಡಿಯ ಗ್ಲಾಸ್‌ಗಳು ಒಡೆದಿವೆ. ಕಾಲೇಜು ಒಳಗಡೆ ಪ್ರವೇಶಿಸಿದರೆ ಸಾಕು ಎಲ್ಲೆಡೆ ಧೂಳು, ಕಸಕಡ್ಡಿ ಬಿದ್ದಿದ್ದರೂ ಅದನ್ನು ಸ್ವಚ್ಛಗೊಳಿಸುತ್ತಿಲ್ಲ. ಅದೇ ಸ್ಥಿತಿಯಲ್ಲಿ ಪಾಠ ನಡೆಯುತ್ತದೆ. ಮುರಿದಿರುವ ಗ್ಲಾಸ್‌ಗಳ ಬದಲಿಗೆ ಎಲ್ಲೆಡೆ ರಟ್ಟಿನ ಹಾಳೆ ಹಚ್ಚಲಾಗಿದೆ.
ಕಾಲೇಜು ಕಾರ್ಯಾಲಯ ಕಟ್ಟಡದ ಚಾವಣಿ ಮೇಲ್ಗಡೆ ಆಕಾಶ ಕಾಣುವಂತೆ ಪೂರ್ತಿ ಬಿರುಕು ಕಂಡು ಬರುತ್ತದೆ. ಬಾಗಿಲು ಮುರಿದಿದ್ದು ಅದನ್ನು ಸುಧಾರಿಸದೆ ಕಲ್ಲು ಇಟ್ಟು ನಿಲ್ಲಿಸಿದ್ದಾರೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟು ಹಾಳಾಗಿವೆ. ಕೊಠಡಿಗಳಲ್ಲಿಯ ನೆಲಹಾಸು ಸಹ ಕಿತ್ತು ಹೋಗಿವೆ. ಕಾಲೇಜಿಗೆ ಗೇಟ್ ಇಲ್ಲದಿರುವುದರಿಂದ ಹೊರಗಿನವರು ಯಾವಾಗ ಬೇಕಾದಾಗ ಪ್ರವೇಶಿಸುವಂತಾಗಿದೆ.
ಕಾಲೇಜು ಮೈದಾನದಲ್ಲಿ ಗಿಡ, ಗಂಟಿ ಬೆಳೆದು ಹೆದರಿಕೆ ಬರುವಂತೆ ಕಾಣುತ್ತಿದೆ. ಅದನ್ನು ಕತ್ತರಿಸಿ ಸುಂದರಗೊಳಿಸಬೇಕೆಂಬ ಪರಿಜ್ಞಾನವೂ ಇದ್ದಂತಿಲ್ಲ. ಬೋರ್‌ವೆಲ್ ಇಲ್ಲದಿರುವುದರಿಂದ ನೀರಿನ ಸಮಸ್ಯೆ ಇಲ್ಲಿದೆ. ಅದನ್ನು ಪರಿಹರಿಸುವ ಗೋಜಿಗೆ ಸರಕಾರ ಹೋಗಿಲ್ಲ. ಈ ಕಾಲೇಜು ಮೂಲ ಸೌಕರ್ಯಗಳಿಂದ ಪೂರ್ತಿ ವಂಚಿತವಾಗಿದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಕಟ್ಟಡ ನೋಡಲು ಸುಂದರವಾಗಿ ಕಂಡರೂ ಒಳಗೆಲ್ಲ ಹುಳುಕು ಎಂಬಂತಾಗಿದೆ. ಸರಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ. ಎನ್ನುವ ದೂರುಗಳಿವೆ. ಈ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿದ್ದರೂ ಸರಕಾರ ಸೌಲಭ್ಯ ಒದಗಿಸದಿರುವುದು ವಿದ್ಯಾರ್ಥಿಗಳ ದುರ್ದೈವವೆನ್ನಬಹುದು.
•ಸಿ.ವೈ. ಮೆಣಶಿನಕಾಯಿ