ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಈ ಹಿಂದೆ ನಿಗದಿಯಾಗಿದ್ದಂತೆ ನಾಳೆ ಅಂದರೆ ಮಾರ್ಚ್ 3 ರಂದು ಗಲ್ಲಿಗೇರಿಸಲಾಗುವುದಿಲ್ಲ. ಹಾಗಾಗಿ ಈ ಪಾತಕಿಗಳು ನೇಣಿಗೆ ಏರುವ ದಿನ ಇನ್ನಷ್ಟು ದಿನ ವಿಳಂಬವಾಗುವ ಸಾಧ್ಯತೆಯಿದೆ.
ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾಗಿರುವ ಪವನ್ ಗುಪ್ತಾ ತಮ್ಮ ಮೇಲಿನ ಗಲ್ಲು ಶಿಕ್ಷೆಗೆ ತಡೆಕೋರಿ ಸಲ್ಲಿಸಿರುವ ಅರ್ಜಿಯನ್ನು ಪಟಿಯಾಲಾ ಹೌಸ್ ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವ ಕಾರಣ ಮಾರ್ಚ್ 3ರಂದು ಈ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ದಿನಾಂಕವನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ವಿಚಾರಣೆಯನ್ನು ಮುಂದಿನ ಆದೇಶದವರೆಗೆ ಮುಂದೂಡಿದ್ದಾರೆ. ಇದಕ್ಕೂ ಮೊದಲು, ಡೆತ್ ವಾರೆಂಟ್ ಗೆ ತಡೆ ಕೋರಿ ಪವನ್ ಗುಪ್ತಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಇಂದು ಬೆಳಿಗ್ಗೆ ತಿರಸ್ಕರಿಸಿತ್ತು.
ಪವನ್ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿರುವುದರಿಂದ ಗಲ್ಲುಶಿಕ್ಷೆಗೆ ತಡೆನೀಡಬೇಕೆಂದು ಆತನ ಪರ ವಕೀಲ ಎ.ಪಿ.ಸಿಂಗ್ ಅವರು ಈ ಸಂದರ್ಭದಲ್ಲಿ ನ್ಯಾಯಾಲಯವನ್ನು ಕೋರಿಕೊಂಡರು. ಇದಕ್ಕೆ ಉತ್ತರಿಸಿದ ನ್ಯಾಯಾಧೀಶರು ಭೋಜನ ವಿರಾಮದ ಬಳಿಕ ಬರುವಂತೆ ಸೂಚಿಸಿದರು.
ಭೋಜನ ವಿರಾಮದ ಬಳಿಕ ವಿಚಾರಣೆ ಪ್ರಾರಂಭವಾದಾಗ ಪವನ್ ಗುಪ್ತಾ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, ‘ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ, ನೀವು ಎಚ್ಚರಿಕೆಯಿಂದಿರಬೇಕು’ ಎಂದು ಹೇಳಿತು. ‘ಯಾರೊಬ್ಬರೂ ಒಂದು ತಪ್ಪು ಹೆಜ್ಜೆ ಇಟ್ಟರೂ ಅದರ ಪರಿಣಾಮ ಭೀಕರವಾಗಿರಲಿದೆ’ ಎಂದೂ ನ್ಯಾಯಾಲಯವು ಇದೇ ಸಂದರ್ಭದಲ್ಲಿ ಎಚ್ಚರಿಕೆಯ ಮಾತುಗಳನ್ನಾಡಿತು.
ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ತಿಹಾರ್ ಜೈಲಿನ ಅಧಿಕಾರಿಗಳು, ‘ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿರುವುದರಿಂದ ಚೆಂಡು ಈಗ ಸರಕಾರದ ಅಂಗಳದಲ್ಲಿದೆ’ ಎಂದು ನ್ಯಾಯಾಲಯದ ಮುಂದೆ ನುಡಿದರು.