Advertisement

ರೋಪ್‌ವೇ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಿಲ್ಲ

06:33 AM Sep 16, 2020 | mahesh |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ರೋಪ್‌ ವೇ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಗೆ ಚಾಲನೆ ಕಾರ್ಯಕ್ರಮ ಮಂಗಳವಾರ ಕೊಲ್ಲೂರು ದೇವಸ್ಥಾನದಲ್ಲಿ ನಡೆಯಿತು.

Advertisement

ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ದೀಪ ಬೆಳಗಿಸಿ ಡಿಪಿಆರ್‌ ತಯಾರಿಗೆ ಚಾಲನೆ ನೀಡಿ ಮಾತನಾಡಿ, ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ನಾನು ಈ ಹಿಂದೆಯೇ ಕನಸು ಕಂಡಿದ್ದೆ. ಅದಕ್ಕೀಗ ಸಂಸದ ಬಿ.ವೈ. ರಾಘವೇಂದ್ರ ಅವರು ಜೀವ ನೀಡುತ್ತಿದ್ದಾರೆ. 6ರಿಂದ 8 ಕಿ.ಮೀ. ಉದ್ದದ ಈ ರೋಪ್‌ ವೇ ಭಾರತದಲ್ಲಿಯೇ ಅತೀ ಉದ್ದವಾದ ರೋಪ್‌ವೇ ಎನಿಸಿಕೊಳ್ಳಲಿದೆ. ಯುರೋಪಿಯನ್‌ ಮಾದರಿಯಲ್ಲಿ ಯೋಜನೆ ರೂಪುಗೊಳ್ಳಲಿದೆ. ಇದರಿಂದ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಭಾಗದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.

ಶೀಘ್ರ ಪೂರ್ಣ
ರೋಪ್‌ವೇ ನಿರ್ಮಾಣದಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಅರಣ್ಯಕ್ಕೂ ಸಮಸ್ಯೆಯಾಗುವುದಿಲ್ಲ. ಕೊಡಚಾದ್ರಿಯ ಅದ್ಭುತ ದೃಶ್ಯಗಳನ್ನು ಕಣ್ತುಂಬಿ ಕೊಳ್ಳಲು ಸಾಧ್ಯವಾಗುತ್ತದೆ. ಕೊಡಚಾದ್ರಿ, ಸರ್ವಜ್ಞ ಪೀಠವನ್ನು ಎಲ್ಲರೂ ನೋಡಲು ಅನುಕೂಲವಾಗುತ್ತದೆ ಎಂದು ಹೇಳಿದ ಅವರು, ರೋಪ್‌ವೇ ಆಗುವುದರಿಂದ ಜೀಪ್‌ ಚಾಲಕರು/ ಮಾಲಕರು ಆತಂಕ ಪಡಬೇಕಾಗಿಲ್ಲ. ರೋಪ್‌ವೇ ಸ್ಥಳದ ತನಕ ಹೋಗಲು ಜೀಪ್‌ಗ್ಳ ಆವಶ್ಯಕತೆ ಇರುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯಾದಂತೆ ಅವಕಾಶಗಳು ಸೃಷ್ಟಿಯಾಗುತ್ತವೆ. ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯುಪಿಐಎಲ್‌ ಸಂಸ್ಥೆ ಮೂಲಕ ಅನುಷ್ಠಾನವಾಗಲಿರುವ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಎಂಜಿನಿಯರ್‌ ರಾಜೇಶ ಪ್ರಸಾದ್‌, ಎಸ್‌.ಬಿ.ಆರ್‌. ಪಾಟೀಲ್‌, ಉದ್ಯಮಿ ವೆಂಕಟೇಶ್‌ ಕಿಣಿ, ಸ್ಥಳೀಯ ಪ್ರಮುಖರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಪೂಜಾರಿ ಜೆಡ್ಡು, ಕಳಿ ಚಂದ್ರಯ್ಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್‌ ಕುಮಾರ ಶೆಟ್ಟಿ ಸ್ವಾಗತಿಸಿ, ಕಾರ್ಯ ಕ್ರಮ ನಿರ್ವಹಿಸಿದರು.

ಉದಯವಾಣಿ ವರದಿ
ಕೊಡಚಾದ್ರಿ ಏರಲು ಕೊಲ್ಲೂರಿನಿಂದ ರೋಪ್‌ವೇ ನಿರ್ಮಾಣವಾಗಲಿದೆ ಎಂಬ ಬಗ್ಗೆ ಜೂ. 24ರಂದು ಉದಯವಾಣಿಯು ವಿಸ್ತೃತ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next