ಬೆಂಗಳೂರು: ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಇರುವವರಿಗೆ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಹಾಕಲು ಸೂಚನೆ ನೀಡಲಾಗಿದ್ದು, ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿರುವವರು ಹೊರಗಿನ ವ್ಯಕ್ತಿಗಳ ಭೇಟಿ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಡೋಸ್ ಆಗಿರುವ ಹೊರಗಿನ ವ್ಯಕ್ತಿಗಳನ್ನು ಮಾತ್ರ ಕ್ಲಸ್ಟರ್ ನಲ್ಲಿರುವವರು ಭೇಟಿ ಮಾಡಬೇಕು. ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ಕೊಡದಂತೆ ನಿರ್ಬಂಧಿಸಲು ಸೂಚಿಸಿದ್ದೇನೆ ಎಂದರು.
ಪೊಲೀಸರ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಪದಗಳ ಬಳಕೆ ವಿಚಾರಕ್ಕೆ ಮಾತನಾಡಿದ ಸಿಎಂ, ಗೃಹ ಸಚಿವರ ಜತೆ ಇದರ ಬಗ್ಗೆ ಮಾತಾಡಿದ್ದೇನೆ. ಗೃಹ ಸಚಿವರು ಸ್ಪಷ್ಠೀಕರಣ ಕೊಟ್ಟಿದಾರೆ. ಪೊಲೀಸರ ಬಗ್ಗೆ ಗೃಹ ಸಚಿವರಿಗೆ ಬಹಳ ಕಾಳಜಿಯಿದೆ. ಎಲ್ಲ ಪೊಲೀಸರಿಗೂ ಆರಗ ಜ್ಞಾನೇಂದ್ರರು ಆ ಮಾತುಗಳನ್ನು ಹೇಳಲಿಲ್ಲ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಪೊಲೀಸರಿಗೆ ಹಾಗೆ ಮಾತಾಡಿರುವುದಾಗಿ ಹೇಳಿದ್ದಾರೆ. ಅವರು ಒಳ್ಳೇ ಗೃಹ ಸಚಿವರು ಎಂದು ಹೇಳಿದರು.
ಇದನ್ನೂ ಓದಿ:ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ
ಆಕ್ಸಿಜನ್ ಕೊರತೆಯಿಂದ ಸಾವುಗಳಾದ ಬಗ್ಗೆ ಪಂಜಾಬ್ ಬಿಟ್ಟು ಬೇರೆ ಯಾವುದೇ ರಾಜ್ಯಗಳು ವರದಿ ಕಳಿಸಿಲ್ಲ ಎಂಬ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಸತ್ ನಲ್ಲಿ ಕೇಂದ್ರದ ಆರೋಗ್ಯ ಸಚಿವರು ಯಾವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆಂದು ಗೊತ್ತಿಲ್ಲ. ಸಂಸತ್ ನಲ್ಲಿ ಯಾವುದೋ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಕೊಟ್ಟಿರುತ್ತಾರೆ. ಯಾವ ಸಂದರ್ಭದಲ್ಲಿ ಆ ಉತ್ತರ ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.