ಹಜಾರಿಬಾಗ್: ”ಈ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆದ್ದರೆ ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ.
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮಾಜಿ ಸಿಎಂ ಹೇಮಂತ್ ಸೋರೆನ್ ಬಂಧನದ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿ, ಅದಾನಿ ಮತ್ತು ಅಂಬಾನಿ ಅವರನ್ನು ಬಂಧಿಸಲು ಧೈರ್ಯ ತೋರಿ ಎಂದು ಸವಾಲು ಎಸೆದರು.
“ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಜನರು ಅಪಾಯದಲ್ಲಿದ್ದಾರೆ. ನಿಮಗೆ ಮೂಲಭೂತ ಹಕ್ಕುಗಳಿಲ್ಲದಿದ್ದರೆ, ನೀವು ಗುಲಾಮರಾಗುತ್ತೀರಿ” ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮೈತ್ರಿಕೂಟ ಅಧಿಕಾರಕ್ಕೆ ತಂದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಿಂದ ಬಂಧನಕ್ಕೊಳಗಾಗಿದ್ದ ಇಂಡಿಯಾ ಮೈತ್ರಿಕೂಟದ ಎಲ್ಲ ನಾಯಕರನ್ನು ಮುಕ್ತಗೊಳಿಸಲಾಗುವುದು ಎಂದು ಖರ್ಗೆ ಹೇಳಿದರು.
ಚುನಾವಣ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿದವರು ಪ್ರಮುಖ ಗುತ್ತಿಗೆ ಪಡೆದಿದ್ದಾರೆ ಎಂದು ಖರ್ಗೆ ಆರೋಪಿಸಿ, ಈ ಬಾರಿ ಮೋದಿ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂದರು.