Advertisement

Mopa ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯವಿಲ್ಲ:ಪ್ರವಾಸೋದ್ಯಮಕ್ಕೆ ಹೊಡೆತ?

05:09 PM Aug 09, 2023 | Team Udayavani |

ಪಣಜಿ: ಗೋವಾದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯವಿಲ್ಲ ಎಂಬುದು ಬೆಳಕಿಗೆ ಬಂದಿದೆ. ಇದರಿಂದಾಗಿ ಗೋವಾ ಪ್ರವಾಸೋದ್ಯಮಕ್ಕೆ ಹೆಚ್ಚಿನ ಹೊಡೆತ ಬೀಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

Advertisement

ಗೋವಾ ಅತ್ಯಾಕರ್ಷಣೀಯ ಪ್ರವಾಸಿ ತಾಣಗಳನ್ನು ಹೊಂದಿರುವ ದೇಶ-ವಿದೇಶಿಯ ಪ್ರವಾಸಿಗರ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. ಇದರಿಂದಾಗಿ ಗೋವಾಕ್ಕೆ ದೇಶೀಯ ಪ್ರವಾಸಿಗರಂತೆಯೇ ವಿದೇಶಿ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಗೋವಾದ ವಾಸ್ಕೊ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಬಹುತೇಕ ಎಲ್ಲ ವಿಮಾನಗಳನ್ನು ಇದೀಗ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಮೋಪಾ ವಿಮಾನ ನಿಲ್ದಾಣದಲ್ಲಿ ವಿದೇಶಿ   ಪ್ರವಾಸಿಗರಿಗೆ ಇ-ವೀಸಾ ಸೌಲಭ್ಯವಿಲ್ಲದ ಕಾರಣ ಹೆಚ್ಚಿನ ತೊಂದರೆಯುಂಟಾಗುವಂತಾಗಿದೆ. ಮೋಪಾ ವಿಮಾನ ನಿಲ್ದಾಣದಲ್ಲಿ ಇ-ವೀಸಾ ಪಡೆದುಕೊಳ್ಳುವ ಭರವಸೆಯೊಂದಿಗೆ ವಿದೇಶದಿಂದ ಗೋವಾ ಮೋಪಾ ವಿಮಾನ ನಿಲ್ದಾಣಕ್ಕೆ ಬಂದರೆ ಅಂತಹ ವಿದೇಶಿ ಪ್ರವಾಸಿಗರನ್ನು ವಾಪಸ್ಸು ಕಳುಹಿಸುವ ಅನಿವಾರ್ಯತೆ ಎದುರಾಗಲಿದೆ. ಇದರಿಂದಾಗಿ ಗೋವಾ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬೀಳುವ ಆತಂಕ ಎದುರಾಗಿದೆ.

ಇ-ವೀಸಾದ ಈ ಸೌಲಭ್ಯವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಆದಾಗ್ಯೂ, ದಾಬೋಲಿಮ್ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳನ್ನು ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಆದ್ದರಿಂದ, ಅನೇಕ ಪ್ರಮುಖ ವಿಮಾನಗಳು ಪ್ರಸ್ತುತ ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತವೆ. ಆದರೆ ವಿಮಾನಗಳು ಸ್ಥಳಾಂತರಗೊಂಡಿದ್ದು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಬದಲು ಭಾರಿ ತೊಂದರೆಯಾಗುತ್ತಿದೆ. ಇ-ವೀಸಾ ಅಗತ್ಯವಿರುವ ಪ್ರಯಾಣಿಕರು ಮೋಪಾ ವಿಮಾನ ನಿಲ್ದಾಣಕ್ಕೆ ಬಂದರೆ, ಅವರನ್ನು ಅದೇ ವಿಮಾನದಲ್ಲಿ ವಾಪಸ್ ಕಳುಹಿಸಲಾಗುತ್ತದೆ. ಈ ಮಧ್ಯೆ, ಫಾಟೊರ್ಡಾ ಶಾಸಕ ವಿಜಯ್ ಸರ್ದೇಸಾಯಿ ಅವರು ಮಂಗಳವಾರ ಗೋವಾ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಮೋಪಾ ವಿಮಾನ ನಿಲ್ದಾಣದಲ್ಲಿ ಉಪಕರಣಗಳಿಲ್ಲದ ಕಾರಣ ಇ-ವೀಸಾ ಸೌಲಭ್ಯವಿಲ್ಲ ಎಂದು ಹೇಳಿದ್ದರು. ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರಿಗೆ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next