ಮುಂಬೈ: ಇದೇ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ಬಿಸಿಸಿಐ ತಯಾರಿ ಮಾಡುತ್ತಿದೆ. ಆದರೆ ಇದೀಗ ಬಿಸಿಸಿಐ ಹೊರ ಅಪ್ಡೇಟ್ ನೀಡಿದ್ದು, ವಿಶ್ವಕಪ್ ವೇಳೆ ಯಾವುದೇ ಆನ್ ಲೈನ್ ಟಿಕೆಟ್ ಗಳು ಇರುವುದಿಲ್ಲ ಎಂದಿದೆ.
ಟಿಕೆಟ್ ಹೊಂದಿರುವವರು ಭೌತಿಕ ಟಿಕೆಟ್ ಗಳನ್ನು ಪಡೆದುಕೊಳ್ಳಬೇಕು. 2023 ರ ವಿಶ್ವಕಪ್ ನಲ್ಲಿ ದೇಶಾದ್ಯಂತ ಕ್ರೀಡಾಂಗಣದಲ್ಲಿ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ತೋರಿಸಬೇಕು. ಪಂದ್ಯಾವಳಿಯ ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲಾಗಿದ್ದರೂ ಇ-ಟಿಕೆಟ್ ಗಳಿಗೆ ಯಾವುದೇ ಅವಕಾಶವಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಗುರುವಾರ ಸಭೆಯ ನಂತರ ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಮನೆ ಬಾಡಿಗೆ ಬಗ್ಗೆ ಜಾಹೀರಾತು ಹಾಕಿದ ಮಹಿಳೆಗೆ 1.4 ಲಕ್ಷ ಟೋಪಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸಮಯದಲ್ಲಿ ಕೆಲವು ಸ್ಥಳಗಳಲ್ಲಿ ಇ-ಟಿಕೆಟ್ ಗಳ ಕೊರತೆಯ ಕಾರಣದಿಂದ ಕ್ರೀಡಾಂಗಣದ ಹೊರಗೆ ಪ್ರೇಕ್ಷಕರು ಗಲಾಟೆ ಮಾಡಿದ್ದ ಘಟನೆಯೂ ನಡೆದಿತ್ತು. ಭೌತಿಕ ಟಿಕೆಟ್ ಪ್ರತಿಯನ್ನು ಪಡೆಯಲು ಸುಮಾರು 7 ರಿಂದ 8 ಕೇಂದ್ರಗಳನ್ನು ರಚಿಸಲಾಗುವುದು ಮತ್ತು ಏಕದಿನ ವಿಶ್ವಕಪ್‌ನಲ್ಲಿ ಅಭಿಮಾನಿಗಳಿಗೆ ಸುಗಮ ಅನುಭವವನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಜುಲೈ 27 ದೆಹಲಿಯಲ್ಲಿ ಏಕದಿನ ವಿಶ್ವಕಪ್ ನಲ್ಲಿ ಪಂದ್ಯಗಳನ್ನು ಆಯೋಜಿಸುವ ರಾಜ್ಯ ಸಂಘಗಳೊಂದಿಗೆ ಬಿಸಿಸಿಐ ಉನ್ನತ ಅಧಿಕಾರಿಗಳು ಭೇಟಿಯಾದ ನಂತರದ ಬೆಳವಣಿಗೆಗಳನ್ನು ಜಯ್ ಶಾ ಖಚಿತಪಡಿಸಿದ್ದಾರೆ.