ಹೊಸದಿಲ್ಲಿ : ಈ ಬಾರಿಯ 2017ರ ಮುಂಗಾರು ಮಳೆಗಾಲಕ್ಕೆ ಎಲ್ ನಿನೋ ಬಾಧೆ ಇರುವುದಿಲ್ಲಿ; ಎಲ್ ನಿನೋ ಈ ವರ್ಷ ತಡವಾಗಿ ಕಾಣಿಸಿಕೊಳ್ಳಲಿದ್ದು ಅದರಿಂದ ಭಾರತಕ್ಕೆ ಯಾವುದೇ ಹಾನಿ ಉಂಟಾಗುವ ಲಕ್ಷಣ ಇಲ್ಲ ಎಂದು ದೀರ್ಘಾವಧಿಯ ಹವಾಮಾನ ಭವಿಷ್ಯ ವಿಭಾಗದ ಮುಖ್ಯಸ್ಥರಾಗಿರುವ ಡಿ ಎಸ್ ಪೈ ಹೇಳಿದ್ದಾರೆ.
ಶುಷ್ಕ ಹವಾಮಾನವನ್ನು ಉಂಟುಮಾಡುವ ಎಲ್ ನಿನೋ ಈ ಬಾರಿ ತಡವಾಗಿ ಕಾಣಿಸಿಕೊಳ್ಳುವ ಸಂಭವ ಇರುವುದರಿಂದ ಭಾರತದ ಈ ಬಾರಿಯ ಮಳೆಗಾಲ ಸಾಮಾನ್ಯವಾಗಿಯೇ ಇರಲಿದೆ. ವಿಶ್ವದ ಅಗ್ರ ಹತ್ತಿ ಉತ್ಪಾದಕ ಹಾಗೂ ವಿಶ್ವದ ಎರಡನೇ ದೊಡ್ಡ ಗೋಧಿ ಹಾಗೂ ಸಕ್ಕರೆ ಉತ್ಪಾದನೆ ದೇಶವಾಗಿರುವ ಭಾರತಕ್ಕೆ ಈ ಬಾರಿಯ ಮುಂಗಾರು ಋತುವಿನಲ್ಲಿ ಎಲ್ ನಿನೋ ಭಯ ಇರಲಾರದು ಎಂದು ಪೈ ಹೇಳಿದ್ದಾರೆ.
ಸದ್ಯಕ್ಕೆ ಕಂಡುಬರುತ್ತಿರುವ ಹವಾಮಾನ ವಿದ್ಯಮಾನಗಳನ್ನು ಆಧರಿಸಿ ಈ ಮಾತುಗಳನ್ನು ಹೇಳಬಹುದಾದರೂ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಭ್ಯವಾಗುವ ಇನ್ನಷ್ಟು ಹೆಚ್ಚು ಹವಾಮಾನ ಮಾಹಿತಿಗಳಿಂದ ಈ ವರ್ಷದ ಮುಂಗಾರು ಮಾರುತ ಕುರಿತ ನಿಖರ ಚಿತ್ರಣ ಲಭ್ಯವಾಗಲಿದೆ ಎಂದವರು ಹೇಳಿದರು.
ಶಾಂತ ಸಾಗರದಲ್ಲಿ ಈಗಲೇ ಉಷ್ಣತೆ ಹೆಚ್ಚುತ್ತಿರುವುದರಿಂದ ಎಲ್ ನಿನೋ ಸೃಷ್ಟಿಯಾಗುವ ಸಾಧ್ಯತೆಗಳು ಅಧಿಕ ಇವೆ ಎಂದು ವಿಶ್ವಾದ್ಯಂತದ ಹವಾಮಾನ ಭವಿಷ್ಯಕಾರರು ಹೇಳಿದ್ದಾರೆ. ಆಸ್ಟ್ರೇಲಿಯದ ಹವಾಮಾನ ಇಲಾಖೆ ಕಳೆದ ಫೆ.28ರಂದೇ ಎಲ್‌ನಿನೋ ಸಂಭಾವ್ಯತೆಯನ್ನು ಗಮನಿಸುವ ಎಚ್ಚರಿಕೆಯನ್ನು ನೀಡಿದೆ. ಈ ವರ್ಷ ಎಲ್ ನಿನೋ ಉಂಟಾಗುವ ಸಾಧ್ಯತೆಗಳು ಶೇ.50ರಷ್ಟು ಇವೆ ಎಂದು ಅದು ಹೇಳಿದೆ.
ಎರಡು ವರ್ಷಗಳ ನಿರಂತರ ಮಳೆ ಕೊರತೆಯ ಬಳಿಕ ಕಳೆದ ವರ್ಷ 2016ರಲ್ಲಿ ಭಾರತ ಸಾಮಾನ್ಯ ಮಳೆಗಾಲವನ್ನು ಕಂಡಿದೆ. ಜೂನ್ ನಿಂದ ಸೆಪ್ಟಂಬರ್ ವರೆಗಿನ ಮಳೆಗಾಲದಲ್ಲಿ ಭಾರತವು ತನ್ನ ಅರ್ಧಾಂಶಕ್ಕೂ ಅಧಿಕ ಕೃಷಿ ಭೂಮಿಗೆ ನೀರುಣಿಸುವ ಮಳಯನ್ನು ಪಡೆಯುವುದು ವಾಡಿಕೆಯಾಗಿದೆ.
2014, 2015ರಲ್ಲಿನ ಮಳೆ ಕೊರತೆಯಿಂದಾಗಿ ಭಾರತದ ಗೋಧಿ, ಕಬ್ಬು, ದವಸ ಧಾನ್ಯಗಳ ಉತ್ಪಾದನೆ ತೀವ್ರವಾಗಿ ಕುಂಠಿತವಾಗಿತ್ತು. ಆದರೆ 2016ರ ಉತ್ತಮ ಮಳೆಯಿಂದಾಗಿ ಭಾರತದಲ್ಲಿ ಸಾರ್ವಕಾಲಿಕ ದಾಖಲೆಯ ಭತ್ತ, ಗೋಧಿ, ದವಸ ಧಾನ್ಯಗಳ ಉತ್ಪಾದನೆ ಆಗಿತ್ತು.