Advertisement

ಮಳೆಗಾಲದಲ್ಲೇ ಸಚ್ಚೇರಿಪೇಟೆಯ ಬಾವಿಗಳಲ್ಲಿ ಹನಿ ನೀರಿಲ್ಲ !

10:08 AM Jul 04, 2019 | sudhir |

ಬೆಳ್ಮಣ್‌: ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಮುಂಡ್ಕೂರು ಗ್ರಾಮ ಪಂಚಾಯತ್‌ನ ಸಚ್ಚೇರಿಪೇಟೆಯ ನೂರಕ್ಕೂ ಮಿಕ್ಕಿ ಬಾವಿಗಳಲ್ಲಿ ನೀರ ಸೆಲೆ ಕಾಣಿಸಿಲ್ಲ. ನೀರಿನ ಕೊರತೆಗೆ ಈಗ ವೈಜ್ಞಾನಿಕ ಕಾರಣಗಳನ್ನೂ ಹುಡುಕಲಾಗುತ್ತಿದೆ.

Advertisement

ಸಚ್ಚೇರಿಪೇಟೆಯ ಕಜೆ ಮಾರಿಗುಡಿ ಲೇನ್‌ನಿಂದ ರೈಸ್‌ ಮಿಲ್ ವರೆಗಿನ ನೂರಕ್ಕೂ ಹೆಚ್ಚು ಮನೆಗಳ ಬಾವಿಗಳಲ್ಲಿ ನೀರಿಲ್ಲದೆ ಜನ ಕಂಗಾಲಾಗಿದ್ದಾರೆ. ಇವುಗಳನ್ನು ನಿಷ್ಪ್ರಯೋಜಕ ಬಾವಿಗಳೆಂದು ಗುರುತಿಸಲಾಗಿದೆ.

ಕಾರಣ ನಿಗೂಢ

ಪ್ರತೀ ವರ್ಷ ಈ ಬಾವಿಗಳಲ್ಲಿ ಡಿಸೆಂಬರ್‌ ತಿಂಗಳಲ್ಲಿಯೇ ನೀರು ಬತ್ತಿ ಹೋಗುತ್ತಿದ್ದು ಈ ಬಾರಿಯೂ ಅದೇ ಪರಿಸ್ಥಿತಿ ಉಂಟಾಗಿತ್ತು. ಆದರೆ ಒಂದು ತಿಂಗಳ ಹಿಂದೆ ಒಂದಿಷ್ಟು ಮಳೆಯಾಗಿದ್ದರೂ ಈ ಭಾಗದ ಬಾವಿಗಳಲ್ಲಿ ಅಂತರ್ಜಲ ಒರತೆ ಕಾಣಿಸಿಲ್ಲ. ಸ್ಥಳೀಯರಾದ ವಸಂತಿ ಪೂಜಾರಿಯವರು ಹೇಳುವಂತೆ ಬಾವಿಯಲ್ಲಿ ನೀರು ನಿಲ್ಲಬೇಕಾದರೆ ಪಕ್ಕದ ಶಾಂಭವೀ ನದಿಯಲ್ಲಿ ಒಂದೆರಡು ಭಾರೀ ನೆರೆಯಾಗಬೇಕು. ಆದರೆ ಈ ಬಾರಿ ನದಿಯೂ ತುಂಬಿಲ್ಲ, ನೆರೆಯೂ ಆಗಿಲ್ಲ. ಹಿಂದೆ ಯಾವತ್ತೂ ಮಳೆಗಾಲದಲ್ಲಿ ಬಾವಿಗಳಲ್ಲಿ ನೀರು ತಳ ಕಂಡಿದ್ದಿಲ್ಲ ಎನ್ನುತ್ತಾರೆ.

ಬೋರ್‌ವೆಲ್ಗಳ ಹೆಚ್ಚಳ

Advertisement

ಅಲ್ಲಲ್ಲಿ ಬೋರ್‌ವೆಲ್ಗಳ ಕೊರೆತದಿಂದ ಭೂಮಿಯಲ್ಲಿ ನೀರಿನ ಸೆಲೆ ಕಡಿಮೆಯಾಗಿ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರಬಹುದೆಂದು ನಂಬಲಾಗಿದೆ. ಮುಂದೆ ಬೋರ್‌ವೆಲ್ಗಳಿಗೆ ಪರವಾನಿಗೆ ನೀಡಬಾರದೆಂದು ಈ ಭಾಗದ ಜನ ಒತ್ತಾಯಿಸಿದ್ದಾರೆ.

ಗ್ರಾ.ಪಂ. ನೆರವು

ಬಾವಿಗಳು ಬತ್ತಿದ್ದರೂ, ಗ್ರಾ.ಪಂ.ನ ಸ್ವಜಲಧಾರಾ ಯೋಜನೆಯ ನೀರು ಜನರಿಗೆ ಪ್ರಯೋಜನಕಾರಿಯಾಗಿದೆ. ಹಿಂದೆ ಬೇಸಗೆಯಲ್ಲಿ ಮಾತ್ರ ಗ್ರಾ.ಪಂ. ನೀರು ಬಳಕೆಯಾಗುತ್ತಿದ್ದು, ಈಗ ವರ್ಷದ ಎಲ್ಲ ದಿನಗಳಲ್ಲಿ ಇದೇ ನೀರು ಬಳಕೆಯಾಗುತ್ತಿದೆ. ತುಸು ಮಳೆ ಸುರಿಯುತ್ತಿದ್ದರೂ ನೀರಿಲ್ಲದೆ ಜನ ಕೊಡ ಹಿಡಿದು ಪಂಚಾಯತ್‌ ನೀರಿಗೆ ಕಾಯುವಂತಾಗಿದೆ.

ಕಾರಣ ಹುಡುಕುತ್ತೇವೆ

ಮಳೆ ಬಂದರೂ ಸಚ್ಚೇರಿಪೇಟೆಯ ರಸ್ತೆಯ ಒಂದು ಭಾಗದಲ್ಲಿ ಮಾತ್ರ ನೂರಾರು ಬಾವಿಗಳಲ್ಲಿ ನೀರಿಲ್ಲದಿರುವುದು ಆಶ್ಚರ್ಯಕರವಾದುದು. ಇಲ್ಲಿ ಡಿಸೆಂಬರ್‌ ತಿಂಗಳಿಂದಲೇ ಪಂಚಾಯತ್‌ನ ನೀರು ಬಳಕೆಯಾಗುತ್ತಿದೆ, ನೀರು ಅಲಭ್ಯತೆಗೆ ಕಾರಣ ಹುಡುಕಲಾಗುವುದು.
– ಶುಭಾ ಪಿ.ಶೆಟ್ಟಿ, ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ
ಎಚ್ಚೆತ್ತರೆ ಒಳ್ಳೆಯದು

ಕರಾವಳಿ ಪದ್ರೇಶದ ಸೂಕ್ಷ್ಮ ಪ್ರಕೃತಿಗೆ ವಿರುದ್ಧ ಕೈಗಾರಿಕೆಗಳು ಸ್ಥಾಪನೆಗೊಂಡಿದ್ದರಿಂದ ಅವಿಭಜಿತ ದ.ಕ. ಜಿಲ್ಲೆ ಮರುಭೂಮಿ ಪ್ರದೇಶವಾಗುವ ಮುನ್ಸೂಚನೆಯನ್ನು ನಾವೀಗಲೇ ಕಾಣುತ್ತಿದ್ದೇವೆ. ಇದರ ಬಗ್ಗೆ ನಾವು ಈಗಾಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು.
– ಶರತ್‌ ಶೆಟ್ಟಿ , ಸಚ್ಚೇರಿಪೇಟೆ
– ಶರತ್‌ ಶೆಟ್ಟಿ ಮುಂಡ್ಕೂರು
Advertisement

Udayavani is now on Telegram. Click here to join our channel and stay updated with the latest news.

Next