ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಯಾವುದೇ ಅನುಮಾನವಿಲ್ಲದೆ ಭಾರತೀಯ ನಾಯಕ ವಿರಾಟ್ ಕೊಹ್ಲಿಯೇ ವಿಶ್ವ ಶ್ರೇಷ್ಠ ಆಟಗಾರ ಎಂದಿದ್ದಾರೆ.
ಸರಣಿಗೂ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇನ್ ವಿಲಿಯಮ್ಸನ್, ಮೂರು ಮಾದರಿ ಕ್ರಿಕೆಟ್ ನಲ್ಲಿ ವಿರಾಟ್ ಅತ್ಯುನ್ನತ ಆಟಗಾರ. ಭಾರತ ತಂಡವೂ ಅದ್ಭುತವಾಗಿದೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವಿಲಿಯಮ್ಸನ್ ಹೇಳಿದ್ದಾರೆ.
ಭಾರತ ತಂಡದಲ್ಲಿ ಅತ್ಯುನ್ನತ ಬ್ಯಾಟಿಂಗ್ ಲೈನ್ ಅಪ್ ಇದೆ. ಅದೇ ರೀತಿ ವಿಶ್ವ ದರ್ಜೆಯ ಬೌಲಿಂಗ್ ದಾಳಿಯಿದೆ. ಹಾಗಾಗಿ ಅದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರ ಸ್ಥಾನದಲ್ಲಿದೆ ಎಂದಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ ಶುಕ್ರವಾರ ಆರಂಭವಾಗಲಿದ್ದು, ವೆಲ್ಲಿಂಗ್ಟನ್ ನಲ್ಲಿ ಆಯೋಜನೆಯಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಎಳು ಪಂದ್ಯಗಳನ್ನಾಡಿದ್ದು, ಎಲ್ಲಾ ಎಳೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಮತ್ತೊಂದು ಕಡೆ ಕಿವೀಸ್ ಆರನೇ ಸ್ಥಾನದಲ್ಲಿದ್ದು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತು ಒಂದನ್ನು ಮಾತ್ರ ಗೆದ್ದಿದೆ.