Advertisement

ಮತ್ತೆ ಇವಿಎಂ ಬಗ್ಗೆ ಅನುಮಾನ

03:07 AM May 21, 2019 | Sriram |

ಬೆಂಗಳೂರು: ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆಗಳ ನಿಖರತೆ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅನುಮಾನ ವ್ಯಕ್ತಪಡಿಸಿವೆ. ಜತೆಗೆ ಇವಿಎಂಗಳ ಬಗ್ಗೆಯೂ ತಕರಾರು ತೆಗೆದಿವೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ಸಮೀಕ್ಷೆಗಳನ್ನು ನಂಬಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Advertisement

ಸಿಎಂ ಆಕ್ರೋಶ: ಚುನಾವಣೋತ್ತರ ಸಮೀಕ್ಷೆಗಳು ಒಂದು ಪಕ್ಷ ಹಾಗೂ ವ್ಯಕ್ತಿ ಪರವಾದ ಸುಳ್ಳು ವರದಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಇವಿಎಂಗಳ ಬಗ್ಗೆಯೂ ಆನುಮಾನ ವ್ಯಕ್ತಪಡಿಸಿದ್ದಾರೆ.

“ಇದು ಎಕ್ಸಿಟ್‌ ಪೋಲ್‌ ಅಷ್ಟೆ, ಎಕ್ಸಾಕ್ಟ್ ಪೋಲ್‌ ಅಲ್ಲ. ಎಕ್ಸಿಟ್‌ ಪೋಲ್‌ ದೇಶದಲ್ಲಿ ಮೋದಿ ಅಲೆ ಇದೆ ಎಂದು ತೋರಿಸಲು ಅಷ್ಟೆ. ತಾತ್ಕಾಲಿಕ, ಕಾಲ್ಪನಿಕ ಮೋದಿ ಅಲೆ ಹೆಚ್ಚು ದಿನ ಇರಲ್ಲ. ಬಹುಮತ ಕೊರತೆಯಾದರೆ ಪ್ರಾದೇಶಿಕ ಪಕ್ಷ ಸೆಳೆಯಲು ಯತ್ನಿಸಲಾಗುತ್ತದೆ.ಎಕ್ಸಿಟ್‌ ಪೋಲ್‌ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ. ಬಿಜೆಪಿ ಎಕ್ಸಿಟ್‌ ಪೋಲ್‌ ಮೂಲಕ ವೇದಿಕೆ ಸಿದಟಛಿಪಡಿಸುತ್ತಿದೆ. ಮಮತಾ ಬ್ಯಾನರ್ಜಿ, ಎಚ್‌.ಡಿ. ದೇವೇಗೌಡ, ರಾಹುಲ್‌ಗಾಂಧಿ, ಅಖೀಲೇಶ್‌ಯಾದವ್‌, ಬಿಎಸ್‌ಪಿ ಹಾಗೂ 2019 ಎಕ್ಸಿಟ್‌ ಪೋಲ್‌ ಹ್ಯಾಷ್‌ಟ್ಯಾಗ್‌ ಹಾಕಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ಮತ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ.ಈ ಸಂಬಂಧ ಪ್ರತಿಪಕ್ಷಗಳ ನಾಯಕರು ಸುಪ್ರೀಂಕೋರ್ಟ್‌ ಮೆಟ್ಟಿಲು ಏರಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳೇ ಬ್ಯಾಲೆಟ್‌ ಪೇಪರ್‌ಗಳನ್ನು
ಆಯ್ಕೆ ಮಾಡುತ್ತಿವೆ. ಎಕ್ಸಿಟ್‌ ಪೋಲ್‌ ಆಡಳಿತ ಪಕ್ಷದ ಪರವಾಗಿ ಇದೆ. ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

Advertisement

ಹೇಳಿ ಮಾಡಿಸಿದಂತೆ ಇದೆ: ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಫ‌ಲಿತಾಂಶ ನೋಡಿದರೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದಂತಿದ್ದು, ಇವಿಎಂಗಳ ಮೇಲೆ ಅನುಮಾನ ಮೂಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಇವಿಎಂ ಹ್ಯಾಕ್‌ ಮಾಡುವ ಬಗ್ಗೆ ಇಡಿ ದೇಶದಲ್ಲಿ ಮಾತುಗಳು ಕೇಳಿ ಬರುತ್ತಿವೆ. ದೇಶದಲ್ಲಿ ವಸ್ತು ಸ್ಥಿತಿ ಬೇರೆ ಯೇ ಇದೆ. ಈ ಸಂದರ್ಭದಲ್ಲಿ ಪಕ್ಷ 300 ಸ್ಥಾನ ಗೆಲ್ಲುತ್ತದೆ ಎಂದು ಹೇಳಿಕೊಂಡು ಬಿಜೆಪಿ ಯವರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

23ರ ಫ‌ಲಿತಾಂಶ ಬಂದ ಮೇಲೆ ಎಲ್ಲ ಚಿತ್ರಣ ಗೊತ್ತಾಗಲಿದೆ. ಈ ಬಾರಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಇವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡಿದ್ದು, ನಮಗೆ ದೊರೆತಿರುವ ಮಾಹಿತಿ ಪ್ರಕಾರ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿಯೂ ಮೈತ್ರಿ ಪಕ್ಷಗಳು 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಿಜೆಪಿಗೆ 18 ಸ್ಥಾನ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿಯೂ ಈ ಬಗ್ಗೆ ಆರೋಪ ಮಾಡಿದ್ದೆವು. ಅಲ್ಲದೆ, ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ದೂರು ನೀಡಿ, ಇವಿಎಂಗಳ ಬದಲು ಮತ ಪತ್ರ ಬಳಸುವಂತೆ ಮನವಿ ಮಾಡಿದ್ದೇವು. ಆದರೆ, ಚುನಾವಣಾ ಆಯೋಗ ನಮ್ಮ ಮನವಿಯನ್ನು ತಳ್ಳಿ ಹಾಕಿತ್ತು. ಅನೇಕರು ಇವಿಎಂ ಹ್ಯಾಕ್‌ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈಗ ಚುನಾವಣಾ ಸಮೀಕ್ಷೆಗಳನ್ನು ನೋಡಿದರೆ ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣಾ ಫ‌ಲಿತಾಂಶ ಮೈತ್ರಿ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.ಸಮೀಕ್ಷೆಯ ಫ‌ಲಿತಾಂಶ ಸತ್ಯ ಆಗದೇ ಇರುವುದರಿಂದ ಊಹಾಪೋಹದ ಬಗ್ಗೆ ಮಾತನಾಡುವುದಿಲ್ಲ. ಫ‌ಲಿತಾಂಶ ಬಂದ ಮೇಲೆ ಯಾರ ಲೆಕ್ಕಾಚಾರ ಏನಿರುತ್ತದೆಯೋ ನೋಸಬೇಕು. ಸರ್ಕಾರಕ್ಕೆ ಮಾತ್ರ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವಾಸ್ತವಕ್ಕೆ ಹತ್ತಿರವಾಗಿಲ್ಲ: ಲೋಕಸಭೆ ಮತದಾನೋತ್ತರ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಐದು ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲಿಲ್ಲ. ಅವರು ಪ್ರಚಾರ ಮಾಡುವುದರಲ್ಲಿಯೇ ಆಡಳಿತ ನಡೆಸಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದರೂ. ಮತದಾನೋತ್ತರ ಸಮೀಕ್ಷೆಗಳು ಅಷ್ಟೊಂದು ಸಂಖ್ಯೆಯ ಬಹುಮತ ತೋರಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದು ತಿಳಿಸಿದರು.

ಎಷ್ಟೋ ಮತಗಟ್ಟೆ ಸಮೀಕ್ಷೆಗಳು ನಿಜವಾಗುವುದಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿಯೂ ಯಾವುದೇ ಮತಗಟ್ಟೆ ಸಮೀಕ್ಷೆಗಳು ನಿಜ ಹೇಳಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಅಥವಾ ಸುಳ್ಳು ಎಂದು ನಾನು ಹೇಳುವುದಿಲ್ಲ. ಕರ್ನಾಟಕದಲ್ಲಿ ಸಮೀಕ್ಷೆಯಲ್ಲಿ ತೋರಿಸಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ಮೈತ್ರಿ ಪಕ್ಷಗಳು ಪಡೆಯುತ್ತವೆ. ಮೈತ್ರಿ ಪಕ್ಷಗಳು ಇನ್ನೂ ಉತ್ತಮವಾಗಿ ಕೆಲಸ ಮಾಡಿದ್ದರೆ, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತಿತ್ತು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಮೇ 23 ಕಾಯಬೇಕು. ಅಂದು ನಿಜವಾದ ಸಮೀಕ್ಷೆ ಬರುತ್ತದೆ ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌, ಸಮೀಕ್ಷೆಗಳು ಎಂದೂ ನಿಜವಾಗುವುದಿಲ್ಲ. ಕೆಲವರು ಅದನ್ನು ನಂಬಿ ಭ್ರಮಾಲೋಕದಲ್ಲಿದ್ದಾರೆ. ಮೇ 23 ರಂದು ಅವರಿಗೆ ನಿರಾಸೆ ಖಂಡಿತ ಎಂದು ಹೇಳಿದ್ದಾರೆ

ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್‌, ಎಕ್ಸಿಟ್ ಪೋಲ್ ನಾಟ್ ಎಕ್ಸ್ಯಾಕ್ಟ್ ಪೋಲ್. ಜನರ ಮೂಡ್‌ ಬದಲಾಯಿಸಿ ಇವಿಎಂಗಳನ್ನು ತಿರುಚುವ ಹುನ್ನಾರ ಇದು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದನ್ನು ಪದೇ ಪದೇ ಹೇಳುತ್ತಿದ್ದಾರೆ. ಟಿವಿ ಚಾನೆಲ್ಗಳಲ್ಲಿ ಮಾತ್ರ ಮೋದಿ ಅಲೆ ಇದೆ. ಮೇ 23 ರ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.

ಲೋಕಸಭೆ ಮತದಾನೋತ್ತರ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಐದು ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲಿಲ್ಲ. ಅವರು ಪ್ರಚಾರ ಮಾಡುವುದರಲ್ಲಿಯೇ ಆಡಳಿತ ನಡೆಸಿದ್ದಾರೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next