ಪಾಟ್ನಾ: ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರ ಎಡವಟ್ಟಿನಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಸಮಸ್ತಿಪುರ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪಾಟ್ನಾದಿಂದ ಸುಮಾರು 80 ಕಿಮೀ ದೂರದಲ್ಲಿರುವ ಸಮಸ್ತಿಪುರ್ ಜಿಲ್ಲೆಯ ಮುಸ್ರಿಘರಾರಿ ಎಂಬ ಸಣ್ಣ ಪಟ್ಟಣದಲ್ಲಿಈ ಘಟನೆ ನಡೆದಿದೆ.
28 ವರ್ಷದ ಬಬಿತಾ ದೇವಿ ಅವರನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಅನಿಶಾ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಈ ವೇಳೆ ಅಲ್ಲಿನ ಸಿಬ್ಬಂದಿಗಳು ವೈದ್ಯರು ಇಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಕಾಂಪೌಂಡರ್ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ಆಪರೇಷನ್ ಆರಂಭಿಸಲಾಗಿದೆ. ಸುಮಾರು ಒಂದು ಗಂಟೆಯ ನಂತರ, ಅವಳನ್ನು ಆಂಬ್ಯುಲೆನ್ಸ್‌ಗೆ ಸೇರಿಸಿದರು ಮತ್ತು ಮೋಹನ್‌ಪುರದ ಆಸ್ಪತ್ರೆಗೆ ಸಾಗಿಸುವಂತೆ ಹೇಳಿದ್ದಾರೆ. ಆದರೆ ಆಕೆಯ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ನಮಗೆ ಹೇಳಲೇ ಇಲ್ಲ. ನಾವು ಆಕೆಯ ಮೈ ಮುಟ್ಟಿ ನೋಡಿದಾಗ ದೇಹ ತಂಪಾಗಿತ್ತು. ಆದರೆ ಮೋಹನ್‌ಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ. ಈ ಕಾರಣದಿಂದ ಮೃತದೇಹವನ್ನು ಅನಿಶಾ ಆರೋಗ್ಯ ಕೇಂದ್ರಕ್ಕೆ ತಂದು ಪ್ರತಿಭಟಿಸಿದ್ದೇವೆ ಎಂದು ಮಹಿಳೆಯ ಸಂಬಂಧಿಕರು ಹೇಳಿದ್ದಾರೆ.
ಆಸ್ಪತ್ರೆಯ ಕಿರಿಯ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.