ಧಾರವಾಡ: ಮುಖ್ಯಮಂತ್ರಿ ಬದಲಾವಣೆ ವಿಚಾರದ ಚರ್ಚೆ ನಮ್ಮ ಪಕ್ಷದಲ್ಲಿ ನಡದೇ ಇಲ್ಲ. ಸಿಎಂ ಬದಲಾವಣೆ ಮಾಡುವ ವಿಚಾರವೂ ಇಲ್ಲ. ಈಗ ಸಿಎಂ ಸ್ಥಾನ ಖಾಲಿನೂ ಇಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹಲವು ನಾಯಕರು ಹೋಗಿದ್ದರು. ದೆಹಲಿ ನಮ್ಮ ರಾಷ್ಟ್ರ ರಾಜಧಾನಿ ಹೀಗಾಗಿ ಅವರು ದೆಹಲಿಗೆ ಹೋಗಿದ್ದರು. ಯಡಿಯೂರಪ್ಪನವರು ನಮ್ಮ ಮುಖ್ಯಮಂತ್ರಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.
ಮಾಲಿನ್ಯಕ್ಕೆ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ರೀತಿಯ ದಾಖಲೆಗಳಿದ್ದರೆ ಕಾಂಗ್ರೆಸ್ ಬಿಡುಗಡೆ ಮಾಡಲಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಎಲ್ಲಾ ಭ್ರಷ್ಟಾಚಾರಗಳು ನಡೆದಿದೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಭ್ರಷ್ಟಾಚಾರ ಎಂಬ ಸಂಸ್ಕೃತಿಯನ್ನು ಹುಟ್ಟು ಹಾಕಿದವರೇ ಕಾಂಗ್ರೆಸ್‌ನವರು ಎಂದರು.
ಇದನ್ನೂ ಓದಿ:ಮೊಬೈಲ್ ನೆಟ್ ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ: ಸಚಿವ ಸುರೇಶ್ ಕುಮಾರ್
ರಮೇಶ ಜಾರಕಿಹೊಳಿ ಅವರು ನಮ್ಮ ನಾಯಕರು. ನಮ್ಮ ಸರ್ಕಾರದಲ್ಲಿ ಸಚಿವರಾಗಿದ್ದಂತವರು. ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗಿ ಬರುತ್ತಾರೆ. ಮುಂದೆ ಅವರಿಗೆ ಸೂಕ್ತ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ಅವರ ನಡುವಿನ ಜಟಾಪಟಿ ಮುಗಿದ ಅಧ್ಯಾಯ. ಆಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ತಜ್ಞರ ವರದಿ ಹೇಳಿದೆ. ಈ ಬಗ್ಗೆ ಏನೇ ತನಿಖೆ ನಡೆಸುವುದಿದ್ದರೆ ಅದನ್ನು ನಡೆಸಲು ಸರ್ಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.