ಸುಳ್ಯ: ಜೆಡಿಎಸ್ ಮನೆಯಲ್ಲಿ ಯಾವುದೇ ಭಿನ್ನಮತವಿಲ್ಲ. ದೇವೇಗೌಡರ ಮಾರ್ಗದರ್ಶನ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಶ್ರೀದೇವರ ಸೇವೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯಲು ಈಗಾಗಲೇ ಬೂತ್ ಮಟ್ಟಲ್ಲಿ ಪಕ್ಷ ಸಂಘಟನಾ ಕಾರ್ಯ ಆರಂಭ ವಾಗಿದೆ. ಅಭ್ಯರ್ಥಿ ಆಯ್ಕೆಯನ್ನು ಪಕ್ಷದ ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ನಿರ್ಧರಿಸಲಿದೆ.
ರಾಜ್ಯದಲ್ಲಿ ಓಡಾಟ ನಡೆಸಿ ಪಕ್ಷ ಸಂಘಟನೆಗೆ ಬಿರುಸಿನ ಚಟುವಟಿಕೆ ನಡೆಯುತ್ತಿದೆ ಎಂದರು.
ಅವಕಾಶ ಕೊಡಿ: ರೈತರನ್ನು ಸಾಲಮುಕ್ತರನ್ನಾಗಿಸಲು ಕೇಂದ್ರ, ರಾಜ್ಯ ಸರಕಾರಗಳೆರಡೂ ಒಮ್ಮತದಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ರಾಷ್ಟ್ರೀಯ ಪಕ್ಷಗಳಿಗೆರಡಕ್ಕೂ ರಾಜ್ಯದ ಜನತೆ ಈಗಾಗಲೇ ಅವಕಾಶ ನೀಡಿದ್ದಾರೆ. ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗ ನಡೆಸಿದ ಕಲ್ಯಾಣ ಕಾರ್ಯಕ್ರಮಗಳು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ¨ªಾಗ ನೀಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನಿಟ್ಟುಕೊಂಡು ಪಕ್ಷಕ್ಕೆ ಅವಕಾಶ ಕಲ್ಪಿಸಲು ರಾಜ್ಯದ ಜನತೆ ಮನವಿ ಮಾಡುವುದಾಗಿ ವಿವರಿಸಿದರು.
ಆಶ್ಲೇಷಾ ಬಲಿ ಸೇವೆ
ಬೆಳಗ್ಗೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಸಚಿವ ರೇವಣ್ಣ ಅವರು ಆಶ್ಲೇಷಾ ಬಲಿ ಸೇವೆ ನೆರವೇರಿಸಿ ಬಳಿಕ ಶ್ರೀ ದೇವರ ದರುಶನ ಪಡೆದು ಮಹಾಪೂಜೆ ಸೇವೆ ನೆರ ವೇರಿ ಸಿದರು. ಈ ಸಂದರ್ಭ ದೇಗುಲದ ಅರ್ಚಕರು ಶಾಲು ಹೊದೆಸಿ ಮಹಾಪ್ರಸಾದ ನೀಡಿ ಗೌರವಿಸಿದರು. ರೇವಣ್ಣ ಅವ ರೊಂದಿಗೆ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ದೇಗುಲದ ಶಿಷ್ಟಾಚಾರ ಅಧಿಕಾರಿ ಕೆ.ಎಂ. ಗೋಪಿ ನಾಥ್ ನಂಬೀಶ ಮತ್ತು ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್. ಸ್ವಾಗತಿಸಿದರು.