Advertisement

10 ತಿಂಗಳಿಂದ ಆಡಳಿತಕ್ಕೆ ಗ್ರಹಣ!

08:07 AM May 28, 2019 | Team Udayavani |

ಗಜೇಂದ್ರಗಡ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಹತ್ತು ತಿಂಗಳು ಕಳೆದರೂ ಸಹ ಈವರೆಗೂ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯ ದೊರೆಯದೇ ಆಡಳಿತಕ್ಕೆ ಗ್ರಹಣ ಹಿಡಿದಂತಾಗಿದೆ. ಆದರೆ ಪುರೆಸಭೆಯಲ್ಲಿ ಅಧಿಕಾರಿಗಳ ದರ್ಬಾರ ಜೋರಾಗಿದೆ.

Advertisement

ಗಜೇಂದ್ರಗಡ 23 ವಾರ್ಡುಗಳಿಗೆ ಚುನಾವಣೆಯೇನೊ ನಡೆದು ಹಲವು ತಿಂಗಳು ಕಳೆದಿದೆ. ಆದರೆ ಪುರಪಿತ್ರರಿಗೆ ಇನ್ನೂ ಪುರಸಭೆಯ ಬಾಗಿಲು ತೆರೆದಿಲ್ಲ. ಇದರಿಂದಾಗಿ ಆಯ್ಕೆಯಾದ ಸದಸ್ಯರು ತೀವ್ರ ನಿರಾಶರಾಗಿದ್ದಾರೆ. ಮೀಸಲಾತಿ ಗೊಂದಲದಿಂದ ಕೆಲ ತಿಂಗಳುಗಳೇ ಗತಿಸಿದವು. ಇದೀಗ ಮತ್ತೆ ಮೀಸಲಾತಿ ಬರದಿರುವುದರಿಂದ ಈವರೆಗೂ ಸ್ಥಳೀಯ ಆಡಳಿತ ಅಸ್ತಿತ್ವಕ್ಕೆ ಬಾರದಂತಾಗಿದೆ.

ಸೆ. 3, 2018ರಂದು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು. ಮತ್ತೆ ಮೀಸಲಾತಿ ಬದಲಾಯಿಸಿದ್ದನ್ನು ಪ್ರಶ್ನಿಸಿ, ಸಾರ್ವಜನಿಕರು ಕೋರ್ಟ್‌ ಮೆಟ್ಟಿಲೇರಿದ್ದರು. ಅಕ್ಟೋಬರ್‌ 9, 2018ರಂದು ಕೋರ್ಟ್‌ ತೀರ್ಪು ನೀಡುವ ಮುನ್ನವೇ ಸರ್ಕಾರ ತನ್ನ ಅರ್ಜಿಯನ್ನು ಹಿಂಪಡೆದು ಮೊದಲ ಮೀಸಲಾತಿ ಪಟ್ಟಿಯನ್ನು ಮುಂದುವರೆಸಲಾಗುವುದು ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಮತ್ತೆ ಕೋರ್ಟ್‌ ಮೆಟ್ಟಿಲೇರಿದ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಬ್ರೇಕ್‌ ಬಿದ್ದಂತಾಗಿದೆ. ಪುರಸಭೆಯ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ವೀಸಲಾತಿ ಇಷ್ಟೊಂದು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಪುರಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದ ಪ್ರತಿನಿಧಿಗಳು ಪುರಸಭೆ ಪ್ರವೇಶಿಸಲು ಹವಣಿಸುತ್ತಿದ್ದಾರೆ. ಕಳೆದ ಹತ್ತು ತಿಂಗಳಿಂದ ಆಡಳಿತ ವ್ಯವಸ್ಥೆ ಮಾತ್ರ ಅಸ್ತಿತ್ವಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕೆಲಸಗಳು ತೀವ್ರಗತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿವೃದ್ಧಿ ಕುಂಠಿತ: ಮೀಸಲಾತಿಯ ಗೊಂದಲದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದೇ ಪುರಸಭೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಗ್ರಹಣ ಹಿಡಿದಂತಾಗಿದೆ. ಪುರಸಭೆಯಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಿರುವುದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಕಾಮಗಾರಿಗಳು ಕುಂಟುತ್ತಾ ತೆವಳುತ್ತಾ ಸಾಗಿವೆ.

ಅಧಿಕಾರಿಗಳ ದರ್ಬಾರ: ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಹೈಕೋರ್ಟ್‌ನಲ್ಲಿ ಇತ್ಯರ್ಥ ಆಗಬೇಕಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಸದ್ಯ ಪುರಸಭೆಯಲ್ಲಿ ಅಧಿಕಾರಿಗಳದ್ದೆ ದರ್ಬಾರ ನಡೆಯುತ್ತಿದೆ. ಇದು ಆಡಳಿತ ವ್ಯವಸ್ಥೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ.

Advertisement

ಮೀಸಲುಗಾಗಿ ಅಧ್ಯಕ್ಷ ಖುರ್ಚಿ ಖಾಲಿ: ನ್ಯಾಯಾಲಯದಲ್ಲಿರುವ ಮೀಸಲಾತಿಯ ವ್ಯಾಜ್ಯ ಈವರೆಗೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆದಿಲ್ಲ. ಈಗಾಗಲೇ ಚುನಾವಣೆ ಮುಗಿದು ವರ್ಷ ಗತಿಸುತ್ತಿದ್ದರೂ ಅಧಿಕಾರ ಭಾಗ್ಯ ದೊರೆಯದಿರುವುದು ಜನಪ್ರತಿನಿಧಿಗಳಿಗೆ ನಿರಾಶೆಯನ್ನುಂಟು ಮಾಡಿದೆ.

•ಡಿ. ಜಿ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next