ಶಿವಮೊಗ್ಗ: ಸಚಿವ ಶ್ರೀ ರಾಮುಲು ಹಾಗೂ ನೂತನ ಶಾಸಕ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಈ ಬಗ್ಗೆ ಯಾರೂ ನಮ್ಮ ಬಳಿ ಮಾತನಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರಿಗೆ ಸಚಿವ ಸಂಪುಟ ವಿಸ್ತರಣೆಯ ಪರಮಾವಧಿಕಾರವಿದೆ. ಅವರು ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಡಿಸಿಎಂ ಹುದ್ದೆ ಹಂಚಿಕೆಯ ಬಗ್ಗೆಯೂ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಸೇರಿ ತೀರ್ಮಾನ ಮಾಡಲಿದ್ದಾರೆ ಎಂದರು.
ರಾಜ್ಯದಲ್ಲಿ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗ ಎಂಬ ಭಿನ್ನಾಭಿಪ್ರಾಯಗಳು ಇಲ್ಲ. ಬಿಜೆಪಿಗೆ ಸೇರಿದ ಮೇಲೆ ಅವರೂ ನಮ್ಮವರೇ. ಎಲ್ಲರೂ ಸೇರಿ ಉಪ ಚುನಾವಣೆ ನಡೆಸಿದ್ದರಿಂದಾಗಿ 12 ಸ್ಥಾನಗಳನ್ನು ಗೆದ್ದಿದ್ದೇವೆ. ಹೊರಗಿನಿಂದ ಪಕ್ಷಕ್ಕೆ ಬಂದವರೂ ಬಿಜೆಪಿಯನ್ನು ತಾಯಿ ಪಕ್ಷ ಎಂದು ಸ್ವೀಕರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ದೇಶದಲ್ಲಿ ವಿವಾದ ಸೃಷ್ಟಿಸಿರುವ ಪೌರತ್ವ ಕಾಯ್ದೆಯ ಬಗ್ಗೆ ಮಾತನಾಡಿದ ನಳಿನ್, ಕಾಯ್ದೆ ಬಗ್ಗೆ ಕಾಂಗ್ರೆಸಿಗರು ಬೆಂಕಿಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ನಮ್ಮ ದೇಶದ ಅಲ್ಪ ಸಂಖ್ಯಾತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ದೇಶದಲ್ಲಿ ಈ ಕಾಯ್ದೆ ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಗಲಭೆ ಎಬ್ಬಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿತ್ತು. ಅಧಿಕಾರದಲ್ಲಿ ಇಲ್ಲದಿರುವಾಗ ಗಲಭೆ ಎಬ್ಬಿಸಿ ಲಾಭ ಪಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಗೆ ಕಳೆದ ಆರು ವರ್ಷದಿಂದ ಗಲಭೆ ಮಾಡಲು ವಿಷಯಗಳು ಸಿಕ್ಕಿರಲಿಲ್ಲ. ಇದೀಗ ಈ ಕಾಯ್ದೆಯನ್ನು ಇಟ್ಟುಕೊಂಡು ಗಲಭೆ ಎಬ್ಬಿಸಿ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಇದೀಗ ಸಂಪೂರ್ಣವಾಗಿ ದಿವಾಳಿ ಎದ್ದಿದೆ. ಕಾಂಗ್ರೆಸ್ ಭೌದ್ದಿಕವಾಗಿ, ವೈಚಾರಿಕ, ಸಂಘಟನಾತ್ಮಕವಾಗಿ ದಿವಾಳಿಯಾಗಿದೆ. ದಿವಾಳಿಯಾಗಿರುವುದನ್ನು ಸರಿಪಡಿಸಿಕೊಳ್ಳಲು ಈ ಕಾಯ್ದೆಯನ್ನಿಟ್ಟುಕೊಂಡು ತಂತ್ರಗಾರಿಕೆ ನಡೆಸುತ್ತಿದೆ. ಕಾಂಗ್ರೆಸ್ ರಾಜಕೀಯದ ಆಟವನ್ನು ಆಡುತ್ತಿದೆ. ಕೇವಲ ಗಲಭೆ ಮಾಡುತ್ತಿದೆ ಎಂದು ಟೀಕಿಸಿದರು