Advertisement

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

10:35 PM Aug 04, 2021 | Team Udayavani |

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗದಿರುವುದರ ಹಿಂದಿನ ಕಥೆ ಬೇರೆಯೇ ಇದೆ.

Advertisement

“ನನಗೆ ದಕ್ಕದ್ದು ಬೇರೆಯವರಿಗೆ ದಕ್ಕಬಾರದು’ ಎಂಬ ಕೆಲವರ ಹಠದಿಂದ ಡಿಸಿಎಂ ಹುದ್ದೆಯೇ ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತಾದರೂ ಮುಖ್ಯಮಂತ್ರಿಯವರು ಇಡೀ ಸಂಪುಟ ತಮ್ಮ ನಿಯಂತ್ರಣ ದಲ್ಲೇ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಆರ್‌. ಅಶೋಕ್‌, ಕೆ.ಎಸ್‌.ಈಶ್ವರಪ್ಪ, ಸುನಿಲ್‌ಕುಮಾರ್‌, ಶ್ರೀರಾಮುಲು, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದರು. ವರಿಷ್ಠರು ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಬಯಸಿದ್ದರು.

ಡಿಸಿಎಂ ಹುದ್ದೆಗೆ ಶ್ರೀರಾಮುಲು ವರಿಷ್ಠರ ಆಯ್ಕೆಯಾಗಿದ್ದರು. ಆರ್‌.ಅಶೋಕ್‌ ಹಾಗೂ ಗೋವಿಂದ ಕಾರಜೋಳ ಪರವಾಗಿ ಮುಖ್ಯಮಂತ್ರಿ  ಇದ್ದರು. ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಕೆ.ಎಸ್‌. ಈಶ್ವರಪ್ಪ ಅವರು ಬೇರೆ ಬೇರೆ ಮೂಲಗಳಿಂದ ಒತ್ತಡ ಹಾಕಲಾರಂಭಿಸಿದರು.

ಕೊನೆಗೆ  ಅಶೋಕ್‌ ಅವರು ನನಗೆ ಉಪ ಮುಖ್ಯಮಂತ್ರಿ ಹುದ್ದೆ ಕೊಡದಿದ್ದರೆ ಆ ಹುದ್ದೆಯ ಸೃಷ್ಟಿಯೇ ಬೇಡ ಎಂದು ಹಠ ಹಿಡಿದರು.  ಈಶ್ವರಪ್ಪ  ಕೂಡ ಇದೇ ಅಭಿಪ್ರಾಯ ವನ್ನು ಸಂಘ ಪರಿವಾರದವರ ಮೂಲಕ ವರಿಷ್ಠರಿಗೆ  ತಲುಪಿಸಿದರು. ಇದು  ಬೊಮ್ಮಾಯಿಗೆ ವರವೇ ಆಯಿತು ಎನ್ನಲಾಗಿದೆ.

Advertisement

ಒಬ್ಬರಿಗೆ ಡಿಸಿಎಂ ಕೊಟ್ಟರೆ ಮತ್ತೂಬ್ಬರು ಮುನಿಸಿಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ವರಿಷ್ಠರ ಮುಂದೆ ಹೇಳಿಕೊಂಡ ಪರಿಣಾಮ ಉಪ ಮುಖ್ಯಮಂತ್ರಿ ಹುದ್ದೆಯೇ ಬೇಡ ಎಂದು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಬೊಮ್ಮಾಯಿ ಶಕ್ತಿ:

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಆಗದಿರುವುದರಿಂದ ಒಂದು ರೀತಿಯಲ್ಲಿ ಮುಖ್ಯಮಂತ್ರಿ  ಬೊಮ್ಮಾಯಿ ಅವರೇ ಪೂರ್ಣ ಪ್ರಮಾಣದ ಕ್ಯಾಪ್ಟನ್‌. ಇಲ್ಲಿ ವೈಸ್‌ ಕ್ಯಾಪ್ಟನ್‌ ಇಲ್ಲವೇ ಇಲ್ಲ. ಇದೂ ಒಂದು ರೀತಿಯಲ್ಲಿ ಅವರು ಬಯಸಿದಂತೆಯೇ ಆದಂತಿದೆ.

ಈ ಹಿಂದೆ ಕಾಂಗ್ರೆಸ್‌ ಸರಕಾರದಲ್ಲೂ  ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹುದ್ದೆಯೇ ಸೃಷ್ಟಿಯಾಗದಂತೆ ನೋಡಿಕೊಂಡಿದ್ದರು. ಡಿ.ಕೆ.ಶಿವಕುಮಾರ್‌, ಡಾ| ಜಿ. ಪರಮೇಶ್ವರ್‌, ಎಚ್‌.ಕೆ.ಪಾಟೀಲ್‌, ಆರ್‌.ವಿ. ದೇಶಪಾಂಡೆ, ಸತೀಶ್‌ ಜಾರಕಿಹೊಳಿ ಡಿಸಿಎಂ ಆಕಾಂಕ್ಷಿಗಳಾಗಿದ್ದರು. ಆದರೆ,  ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಬಂದಾಗ ಡಾ| ಜಿ.ಪರಮೇಶ್ವರ್‌ ಡಿಸಿಎಂ ಆಗಿದ್ದರು.

ಉಪ ಮುಖ್ಯಮಂತ್ರಿ ಸೃಷ್ಟಿ  :

ರಾಜ್ಯದಲ್ಲಿ  ಮೊದಲ ಬಾರಿಗೆ ಡಿಸಿಎಂ ಹುದ್ದೆ ಸೃಷ್ಟಿಯಾಗಿದ್ದು 1992ರಲ್ಲಿ. ವೀರಪ್ಪ ಮೊಲಿ ಸಿಎಂ ಆಗಿದ್ದಾಗ ಎಸ್‌.ಎಂ.ಕೃಷ್ಣ  ಡಿಸಿಎಂ ಆಗಿದ್ದರು. 1994ರಲ್ಲಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾದಾಗ ಜೆ.ಎಚ್‌.ಪಟೇಲ್‌ ಡಿಸಿಎಂ, ಅನಂತರ ಜೆ.ಎಚ್‌.ಪಟೇಲ್‌ ಅವಧಿಯಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಧರಂಸಿಂಗ್‌ ಸಿಎಂ ಹಾಗೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.  ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ  ಯಡಿಯೂರಪ್ಪ ಡಿಸಿಎಂ ಆಗಿದ್ದರು. ಜಗದೀಶ್‌ ಶೆಟ್ಟರ್‌ ಸಿಎಂ ಆಗಿದ್ದಾಗ  ಕೆ.ಎಸ್‌. ಈಶ್ವರಪ್ಪ  ಹಾಗೂ ಆರ್‌. ಅಶೋಕ್‌ ಡಿಸಿಎಂ ಆಗಿದ್ದರು. ಹಿಂದಿನ ಯಡಿಯೂರಪ್ಪ ಸರಕಾರದಲ್ಲಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಡಿಸಿಎಂಗಳಾಗಿದ್ದರು.

 

– ಎಸ್‌. ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next