Advertisement

ಕರೆಂಟ್‌ ಇಲ್ಲಂದ್ರೆ ನೆಟ್‌ವರ್ಕೂ ಇಲ್ಲ…!

10:55 PM Jul 29, 2019 | Sriram |

ಕುಂದಾಪುರ: ಯಾರೇ ಅಧಿಕಾರಕ್ಕೆ ಬಂದರೂ ಗ್ರಾಮೀಣ ಭಾಗದ ಸಮಸ್ಯೆಯನ್ನು ಮಾತ್ರ ಕೇಳ್ಳೋರೇ ಇಲ್ಲ ಅನ್ನುವಂತಾಗಿದೆ. ಕುಂದಾಪುರ – ಬೈಂದೂರು ತಾಲೂಕಿನ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಇರುವುದು ಒಂದು ಬಿಎಸ್ಸೆನ್ನೆಲ್‌ ಟವರ್‌.

Advertisement

ಆದರೆ ಇಲ್ಲಿ ಕರೆಂಟ್‌ ಹೋಯಿತು ಅಂದರೆ ನೆಟ್‌ವರ್ಕ್‌ ಇರೋದೇ ಇಲ್ಲ. ದಿನವಿಡೀ ಕರೆಂಟ್‌ ಇಲ್ಲಂದ್ರೆ ಇಡೀ ಊರೇ ಸಂಪರ್ಕ ರಹಿತವಾಗಿರುತ್ತದೆ.

ಹಳ್ಳಿಹೊಳೆ, ಬೆಳ್ವೆ, ಯಡಮೊಗೆ, ಅಮಾಸೆಬೈಲು, ಜಡ್ಡಿನಗದ್ದೆ, ಶೇಡಿಮನೆ, ಮುದೂರು ಸೇರಿದಂತೆ ಅವಿಭಜಿತ ಕುಂದಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಜನರು ಬಿಎಸ್ಸೆನ್ನೆಲ್‌ ಟವರ್‌ ಅನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ವಿದ್ಯುತ್‌ ಕಡಿತಗೊಂಡರೆ, ಮತ್ತೆ ನೆಟ್‌ವರ್ಕೆ ಇರುವುದಿಲ್ಲ.

ಇದು ಮಳೆಗಾಲ ಬೇರೆ ಆಗಿದ್ದು, ಗಾಳಿ – ಮಳೆ, ಗುಡುಗು – ಮಿಂಚಿನಿಂದಾಗಿ ಆಗಾಗ ಕರೆಂಟ್‌ ಕೈ ಕೊಡುತ್ತಿದೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ, ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಗಾಳಿ – ಮಳೆಗೆ ಮರ ಮುರಿದು ಬಿದ್ದರೆ ಕರೆಂಟ್‌ ತೆಗೆದರೆ ಮತ್ತೆ ಬರುವುದು ಮರು ದಿನವೇ. ಅಲ್ಲಿಯವರೆಗೆ ಕರೆಂಟು ಇಲ್ಲ, ಮೊಬೈಲ್‌ನಲ್ಲಿ ನೆಟ್‌ವರ್ಕ್‌ ಕೂಡ ಇಲ್ಲದ ಸ್ಥಿತಿ. ಈ ವೇಳೆ ತುರ್ತಾಗಿ ಯಾರಿಗಾದರೂ ಕರೆ ಮಾಡಬೇಕು ಅಂದರೂ ನೆಟ್‌ವರ್ಕ್‌ ಇಲ್ಲ.

ಸಮಸ್ಯೆಯೇನು?
ಕೇಂದ್ರ ಸರಕಾರದ ಅಧೀನದಲ್ಲಿರುವ ಬಿಎಸ್ಸೆನ್ನೆಲ್‌ (ಭಾರತೀಯ ದೂರ ಸಂಚಾರ ನಿಗಮ) ಸಂಸ್ಥೆಯು ದೇಶಾದ್ಯಂತ ನಷ್ಟದಲ್ಲಿದ್ದು, ಎಷ್ಟೋ ತಿಂಗಳಿನಿಂದ ಇದರಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಂಬಳವೇ ಸಿಕ್ಕಿಲ್ಲ. ಇನ್ನೂ ಪ್ರತಿ ಟವರ್‌ಗೆ ಇಂತಿಷ್ಟು ಅಂತಾ ಡೀಸೆಲ್‌ ಫಂಡ್‌ ಬಿಡುಗಡೆಯಾಗುತ್ತಿದ್ದು, ಅದು ಕೂಡ ಈಗ ಸ್ಥಗಿತಗೊಂಡಿದೆ. ಇದರಿಂದ ಟವರ್‌ಗಳಲ್ಲಿ ಜನರೇಟರ್‌ ಇದ್ದರೂ, ಡೀಸೆಲ್‌ಗೆ ಅನುದಾನದ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಇನ್ನು ಟವರ್‌ ನಿರ್ವಹಣೆಗೆ ನಿಯೋಜಿಸಲಾದ ಆಪರೇಟರ್‌ಗಳಿಗೂ ಸಂಬಳ ಸಿಗದೇ ಅವರು ಈ ನೌಕರಿ ಬಿಟ್ಟು ಬೇರೆ ಕೆಲಸ ಮಾಡುವಂತಾಗಿದೆ.

Advertisement

ದೇಶಾದ್ಯಂತ ಈ ಸಮಸ್ಯೆ
ಇದು ಕೇವಲ ಕುಂದಾಪುರ, ಉಡುಪಿಯ ಸಮಸ್ಯೆಯಲ್ಲ. ದೇಶಾದ್ಯಂತ ಈ ಸಮಸ್ಯೆಯಿದೆ. ಡೀಸೆಲ್‌ ಫಂಡ್‌ ಬಿಡುಗಡೆಯಾಗದೇ ಹಲವು ತಿಂಗಳಾಗಿವೆ. ಅಲ್ಪ – ಸ್ವಲ್ಪ ಬಿಡುಗಡೆಯಾದರೂ, ಅದು ಜಿಲ್ಲಾ ಕೇಂದ್ರಗಳಲ್ಲಿ ಅಥವಾ ಪ್ರಮುಖ ಕಡೆಗಳಲ್ಲಿನ ಟವರ್‌ ನಿರ್ವಹಣೆಗೆ ತುರ್ತು ಸಂದರ್ಭಗಳ ಅಗತ್ಯಕ್ಕೆಂದು ಇಡಲಾಗುತ್ತದೆ. ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಕ್ರೆಡಿಟ್‌ ಆಧಾರದಲ್ಲಿ 35-40 ಸಾವಿರ ರೂ. ಮೊತ್ತದ ಡೀಸೆಲ್‌ ಖರೀದಿ ಮಾಡಿದ್ದು, ಅದರಲ್ಲಿ ಬರೀ 6-7 ಸಾವಿರ ರೂ. ಅಷ್ಟೇ ಬಿಡುಗಡೆಯಾಗಿದೆ. ಇನ್ನುಳಿದ ಮೊತ್ತ ಬಾಕಿಯೇ ಇದೆ.
– ವಿಜಯಲಕ್ಷ್ಮೀ ಆಚಾರ್ಯ,
ಡಿಜಿಎಂ ಬಿಎಸ್ಸೆನ್ನೆಲ್‌ ಉಡುಪಿ

ನಾವೇ ಹೋಗಿ
ಆನ್‌ ಮಾಡಿ ಬರುವುದು
ಕಳೆದ 6 ತಿಂಗಳಿನಿಂದ ಹಳ್ಳಿಹೊಳೆಯಲ್ಲಿ ನಿರ್ವಹಣೆಗಾಗಿ ಆಪರೇಟರ್‌ಗಳೇ ಇಲ್ಲ. ಕರೆಂಟ್‌ ಹೋದ ತತ್‌ಕ್ಷಣ ನೆಟ್‌ವರ್ಕ್‌ ಕೂಡ ಕೈ ಕೊಡುತ್ತದೆ. ಆಗ ನಾವೇ ಟವರ್‌ ಬಳಿ ಹೋಗಿ, ಡೀಸೆಲ್‌ ಹಾಕಿ, ಆನ್‌ ಮಾಡಿ ಬರುತ್ತೇವೆ. ಆದರೆ ಪ್ರತಿ ಸಲ ಇದನ್ನೇ ಮಾಡುವುದು ಕಷ್ಟ. ನಮ್ಮೂರಿಗೆ ಇರುವುದು ಬಿಎಸ್ಸೆನ್ನೆಲ್‌ ಟವರ್‌ ಮಾತ್ರ. ಇದೇ ಕೈ ಕೊಟ್ಟರೆ ತುರ್ತು ಸಂದರ್ಭ ಕರೆ ಮಾಡಲು ಕೂಡ ಕಷ್ಟವಾಗುತ್ತದೆ.
– ವೆಂಕಟೇಶ್‌ ಶೆಟ್ಟಿ, ಹಳ್ಳಿಹೊಳೆ ಗ್ರಾಮದ ನಿವಾಸಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next