Advertisement
ಬೆಟ್ಟದ ಮೇಲಿನ ಕ್ಯಾಂಪಿನಲ್ಲಿಲ್ಲ ಕೋವಿಡ್ ಭಯ! ಗಮನ ಸೆಳೆದ ಜನಜೀವನ
Related Articles
Advertisement
ಸವಳ್ಯಾರ ಕ್ಯಾಂಪಿನಲ್ಲಿ 10-12 ಮನೆಗಳಿದ್ದು 100 ಜನರಿದ್ದಾರೆ. ಇವರಿಗೆ ಇಂದಿಗೂ ಶುದ್ಧ ಕುಡಿಯುವ ನೀರಿಲ್ಲ. ಸರಿಯಾದ ವಿದ್ಯುತ್ ವ್ಯವಸ್ಥೆಯೂ ಇಲ್ಲ. ಗುಡ್ಡದ ಪ್ರದೇಶದಲ್ಲಿ ಬಾವಿಯಿದ್ದು, ಈ ಬಾವಿಯ ನೀರೇ ಇವರಿಗೆ ವರ್ಷಪೂರ್ತಿ ಜೀವನಕ್ಕೆ ಆಧಾರ. ಇದೇ ನೀರನ್ನೇ ನಿತ್ಯದ ಜೀವನಕ್ಕೆ ಬಳಕೆ ಮಾಡುತ್ತಿದ್ದಾರೆ. ಈ ಬೆಟ್ಟದಲ್ಲಿ ಕೊರೊನಾ ಸುಳಿದಿಲ್ಲ. ಯಾರೊಬ್ಬರಿಗೂ ಸೋಂಕಿನ ಲಕ್ಷಣವೂ ಇಲ್ಲದಿರುವುದು ನಿಜಕ್ಕೂ ಖುಷಿಯ ವಿಚಾರ.
ಈ ಗ್ರಾಮದಲ್ಲಿನ ಜನರು ಸಂತೆ ಮಾರುಕಟ್ಟೆಗೆ ಬರಬೇಕೆಂದರೂ ಗುಡ್ಡ ಇಳಿದು ಕೆಳಗೆ ಬರಬೇಕು. ಇವರು ವಾರಕ್ಕೊಮ್ಮೆ ತಮಗೆ ಬೇಕಾದ ಸಂತೆ ಸೇರಿ ಇತರೆ ಅಗತ್ಯ ವಸ್ತುಗಳೊಂದಿಗೆ ಬೆಟ್ಟವನ್ನೇರಿ ಮನೆ ಸೇರುತ್ತಾರೆ. ಇಲ್ಲಿಗೆ ಯಾರೂ ಹೋಗುವುದಿಲ್ಲ. ಈ ಗ್ರಾಮವು ಹಂಪಸದುರ್ಗ ಗ್ರಾಮದಿಂದ 3-4 ಕಿಮೀ ದೂರದಲ್ಲಿದೆ. ಇವರ ಜೀವನ ಶೈಲಿಯೂ ಇನ್ನೂ ಹಳೇ ಕಾಲದಲ್ಲಿದ್ದಂತೆಯೇ ಇದೆ. ಬೆಟ್ಟದ ಮೇಲೆಯೇ ಭೂಮಿ ಸಮತಟ್ಟು ಮಾಡಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಕೋಳಿ, ಕುರಿ ಸಾಕಾಣಿಕೆಯನ್ನೂ ಮಾಡಿ ಜೀವನದ ಬಂಡಿ ದೂಡುತ್ತಿದ್ದಾರೆ. ಅದರಿಂದ ಬಂದ ಆದಾಯದಲ್ಲಿಯೇ ಉಪ ಜೀವನ ನಡೆಯುತ್ತಿದೆ.
ಇವರೆಲ್ಲ ದೇವದುರ್ಗ ತಾಲೂಕಿನವರು: ಸವಳ್ಯಾರ್ ಕಂಪನಿನ ಜನರೆಲ್ಲ ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನವರು. ಅಲ್ಲಿ ಕುಟುಂಬದ ಕಲಹ ನಡೆದಾಗ ಅಲ್ಲಿಂದ ಇತ್ತ ಜೀವನೋಪಾಯಕ್ಕೆ ಬಂದು ನೆಲೆಸಿದ್ದಾರೆ. ಹೇಗೋ ಕಷ್ಟಪಟ್ಟು ಜೀವನ ಕಟ್ಟಿಕೊಂಡು ಇಂದಿಗೂ ನೆಮ್ಮದಿಯಿಂದ ಇದ್ದಾರೆ. ಸದ್ಯ ಸರ್ಕಾರದಿಂದ ದೊರೆಯುವ ಕೆಲವೊಂದು ವೈಯಕ್ತಿಕ ಸೌಲಭ್ಯ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿದ್ದ ಕಾರಣ ಸೋಲಾರ್ ಅಳವಡಿಸಿಕೊಂಡಿದ್ದಾರೆ.
ಕೊರೊನಾ ಭಯವಿಲ್ಲದ ಗ್ರಾಮ: ಪ್ರಸ್ತುತ ಎಲ್ಲ ಗ್ರಾಮದಲ್ಲೂ ಕೊರೊನಾ ಆರ್ಭಟವಿದೆ. ಮನೆಯ ಪಕ್ಕದವರನ್ನೂ ಹೋಗಿ ಮಾತನಾಡಿಸದ ಸಂಕಷ್ಟದ ಸ್ಥಿತಿ ಎದುರಾಗಿದೆ. ಆದರೆ ಸವಳ್ಯಾರ ಕ್ಯಾಂಪಿನ ಜನ ಮಾತ್ರ ಕೊರೊನಾ ಭಯವಿಲ್ಲದೇ ತಮ್ಮ ನಿತ್ಯದ ಕಾಯಕದಲ್ಲಿ ಎಲ್ಲರೂ ತೊಡಗಿದ್ದಾರೆ. ವರ್ಷದಿಂದಲೂ ಕೊರೊನಾ ಇಲ್ಲಿ ಸುಳಿವೇ ಇಲ್ಲ. ಇವರು ತಮ್ಮಷ್ಟಕ್ಕೆ ತಾವು ಜಾಗೃತರಾಗಿದ್ದಾರೆ. ಕೊರೊನಾ ಬಗ್ಗೆಯೂ ಇವರು ಅಷ್ಟೊಂದು ಭಯಬೀತರಾಗಿಲ್ಲ. ಇಲ್ಲಿನ ಕೆಲವು ಜನರು ಗುಳೆ ಹೋಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸ್ವ ಗ್ರಾಮಕ್ಕೆ ಬರಲೂ ಆಗಿಲ್ಲ. ಹಾಗಾಗಿ ಇರುವ ಕುಟುಂಬಗಳೇ ನೆಮ್ಮದಿಯಿಂದ ಇವೆ.