Advertisement

320 ಗ್ರಾಮಗಳು ಕೋವಿಡ್ ಮುಕ್ತ

08:22 PM Jun 01, 2021 | Team Udayavani |

ವೀರೇಶ ಮಡ್ಲೂರ

Advertisement

ಹಾವೇರಿ: ಇತ್ತೀಚಿನ ದಿನಗಳಲ್ಲಿ ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿರುವುದು ಒಂದೆಡೆ ಆತಂಕ ಮೂಡಿಸಿದ್ದರೆ, ಮತ್ತೂಂದೆಡೆ ಜಿಲ್ಲೆಯಲ್ಲಿ ಇದುವರೆಗೆ 320 ಗ್ರಾಮಗಳಲ್ಲಿ ಕೋವಿಡ್‌ -19 ಸೋಂಕು ಪ್ರಕರಣ ಪತ್ತೆಯಾಗದೇ ಕೊರೊನಾ ಮುಕ್ತವಾಗಿರುವುದು ಮತ್ತೂಂದು ವಿಶೇಷವಾಗಿದೆ.

ಕೊರೊನಾ ಮಹಾಮಾರಿ ಎರಡನೇ ಅಲೆ ರಾಜ್ಯದಲ್ಲಿ ಅರಂಭಗೊಳ್ಳುತ್ತಿದ್ದಂತೆಯೇ ಬೆಂಗಳೂರು, ಮಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಅನೇಕರು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಬೇರೆ ಊರು, ರಾಜ್ಯಗಳಿಂದ ಆಗಮಿಸಿದವರನ್ನು ತಕ್ಷಣ ಕೋವಿಡ್‌ ಪರೀಕ್ಷೆಗೊಳಪಡಿಸಿ, ಹೋಂ ಕ್ವಾರಂಟೈನ್‌ ಗೆ ಒಳಪಡಿಸಿದ್ದರು. ಅಲ್ಲದೇ ಗ್ರಾಮೀಣ ಭಾಗದಲ್ಲಿ ಸಾಧ್ಯವಾದಷ್ಟು ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಕಾರ್ಯಗಳ ಸಂದರ್ಭದಲ್ಲಿ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಿದ್ದಾರೆ.

320 ಗ್ರಾಮ ಕೊರೊನಾ ಮುಕ್ತ: ಜಿಲ್ಲೆಯಲ್ಲಿ 670 ಕಂದಾಯ ಗ್ರಾಮಗಳಿದ್ದು, ಈ ಪೈಕಿ 320 ಗ್ರಾಮಗಳಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗದೇ ಕೊರೊನಾ ಮುಕ್ತವಾಗಿವೆ. ಹಾನಗಲ್ಲ ತಾಲೂಕಿನ 87 ಗ್ರಾಮ, ಹಾವೇರಿ 41, ರಾಣಿಬೆನ್ನೂರು 30, ಹಿರೇಕೆರೂರು 61, ಶಿಗ್ಗಾವಿ 38, ಬ್ಯಾಡಗಿ, 29 ಹಾಗೂ ಸವಣೂರು ತಾಲೂಕಿನ 34 ಗ್ರಾಮಗಳು ಸೇರಿ ಒಟ್ಟು 320 ಗ್ರಾಮಗಳು ಕೊರೊನಾ ಮುಕ್ತವಾಗಿದ್ದು, (ಮೇ 24 ವರೆಗಿನ ಮಾಹಿತಿ) ಗ್ರಾಮಸ್ಥರು ನಿರಾತಂಕವಾಗಿದ್ದಾರೆ.

ನಿತ್ಯ ಬೇರೆಡೆ ಸೋಂಕಿನಿಂದ ಉಂಟಾಗುತ್ತಿರುವ ಸಾವು-ನೋವಿನ ಸಂಗತಿ ಗಮನಿಸುತ್ತಿರುವ ಈ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಕೋವಿಡ್‌ ವಿರುದ್ಧ ಹೋರಾಡಿ ತಮ್ಮ ಗ್ರಾಮದಲ್ಲಿ ಸೋಂಕು ಪತ್ತೆಯಾಗದಂತೆ ಮುಂಜಾಗ್ರತೆ ಕೈಗೊಂಡಿರುವುದು ಇತರೆ ಗ್ರಾಮಸ್ಥರಿಗೆ ಮಾದರಿಯಾಗಿದೆ.

Advertisement

ಅಂಗನವಾಡಿ-ಆಶಾಗಳ ಸೇವೆ ಶ್ಲಾಘನೀಯ: ಕೊರೊನಾ ಎರಡನೇ ಅಲೆ ಆರಂಭಗೊಂಡ ದಿನಗಳಲ್ಲಿ ಜಿಲ್ಲೆಗೆ ವಿವಿಧ ಊರು, ರಾಜ್ಯಗಳಿಂದ ಆಗಮಿಸಿದ ಜನರನ್ನು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ಭೇಟಿ ನೀಡಿ, ಬೇರೆ ಊರುಗಳಿಂದ ಬಂದವರನ್ನು ಪತ್ತೆ ಮಾಡಿ ಅವರಲ್ಲಿ ಜಾಗೃತಿ ಮೂಡಿಸಿದ್ದಲ್ಲದೇ, ಕೋವಿಡ್‌ ಪರೀಕ್ಷೆ ಮಾಡಿಸಲು ಮನವೊಲಿಸಿದ್ದರು. ಇದರ ಪರಿಣಾಮವಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕು ಅಷ್ಟಾಗಿ ಹರಡುವುದು ತಪ್ಪಿದಂತಾಗಿದೆ. ಜಿಲ್ಲೆಯಲ್ಲಿ ಗ್ರಾಪಂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರೇ ಸುಮಾರು 415 ಕೋವಿಡ್‌ ಸೋಂಕಿತರನ್ನು ಪತ್ತೆ ಮಾಡಲು ಸಹಕಾರ ನೀಡಿದ್ದಾರೆ. ಇದರಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಿದ್ದಾರೆ. ಜಿಪಂ ಸಿಇಒ ಮಹಮ್ಮದ್‌ ರೋಷನ್‌ ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರಲ್ಲಿ ಜಾಗೃತಿ ಅಗತ್ಯ: ಸದ್ಯ ಜಿಲ್ಲೆಯಲ್ಲಿ 350 ಗ್ರಾಮಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಂತಹ ಗ್ರಾಮಗಳಲ್ಲಿ ಗ್ರಾಮಸ್ಥರೇ ಸ್ವತಃ ಮುಂಜಾಗ್ರತಾ ಕ್ರಮ ಅನುಸರಿಸುವುದು ಅಗತ್ಯವಿದೆ. ಗ್ರಾಮಗಳಲ್ಲಿ ಅನಗತ್ಯ ಸುತ್ತಾಡುವುದು, ಕೆಲಸಕ್ಕೆ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ನಿಯಮಿತವಾಗಿ ಸ್ಯಾನಿಟೈಸರ್‌ ಬಳಸುವುದು, ತುರ್ತು ಸಂದರ್ಭದಲ್ಲಿ ಹೊರಗಡೆ ಬಂದರೂ ಮನೆಗೆ ಹೋದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು, ಗ್ರಾಮದವರನ್ನು ಹೊರತುಪಡಿಸಿ ಬೇರೆ ಬೇರೆ ಊರುಗಳಿಂದ ಬರುವವರಿಗೆ ಹಾಗೂ ಸಂಬಂ ಧಿಕರಿಗೆ ಸಾಧ್ಯವಾದಷ್ಟು ನಿರ್ಬಂಧ ಹೇರುವುದು, ಸೋಂಕು ಪತ್ತೆಯಾದ ವ್ಯಕ್ತಿಯನ್ನು ಕೂಡಲೇ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸ್ವಯಂಪ್ರೇರಿತವಾಗಿ ಗ್ರಾಮಸ್ಥರೇ ಕೈಗೊಂಡರೆ ಕೊರೊನಾ ಸೋಂಕಿನಿಂದ ಮುಕ್ತವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಒಂದೆಡೆ ಆತಂಕ ಸೃಷ್ಟಿಸಿದ್ದರೆ, ಮತ್ತೂಂದೆಡೆ ಜಿಲ್ಲೆಯ ಗ್ರಾಮೀಣ ಪ್ರದೇಶದ ನೂರಾರು ಗ್ರಾಮಗಳು ಕೊರೊನಾ ಮುಕ್ತವಾಗಿರುವುದು ಸಂತಸಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮ ಕೈಗೊಂಡು ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next