ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರಿಂದ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಹೀಗಾಗಿ ಇಲ್ಲಿ ತೆರವಾಗುವ ಜಾಗಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸಿದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಅವರೇ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಾಗ, ಸುರೇಶ್ ಈ ಹೇಳಿಕೆಯನ್ನು ನೀಡಿದರು.
ತಾಲೂಕಿನ ಕೆಂಗಲ್ ಬಳಿಯ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಮಾತನಾಡಿ, ಚನ್ನಪಟ್ಟಣದಿಂದ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಬೇಕು. ಆಗ ಕಾಂಗ್ರೆಸ್‌ಗೆ ಗೆಲುವು ಸಾಧ್ಯ ಎಂದು ಕಾರ್ಯಕರ್ತರ ಪರವಾಗಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ನೀವು ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ.
ಸ್ಥಳೀಯವಾಗಿ ನಾಯಕತ್ವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಿ, ಒಬ್ಬ ಅಚ್ಚರಿ ಅಭ್ಯರ್ಥಿಯನ್ನು ನೀಡುವ ಕೆಲಸವನ್ನು ವರಿಷ್ಠರು ಮಾಡುತ್ತಾರೆ ಎನ್ನುವ ಮೂಲಕ ಉಪ ಚುನಾವಣೆಗೆ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದರು. ಈ ವೇಳೆ ಪರಿಷತ್ ಸದಸ್ಯ ಪುಟ್ಟಣ್ಣ, ಶಾಸಕ ಮಾಗಡಿ ಬಾಲಕೃಷ್ಣ ಇತರರಿದ್ದರು.