Advertisement

ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ: ಶಿವಪ್ಪ

01:49 PM Apr 11, 2022 | Team Udayavani |

ಆನೇಕಲ್‌: ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಕೆಲವರು ಸುಖಾಸುಮ್ಮನೆ ಇಲ್ಲಸಲ್ಲದ ಮೆಸೇಜ್‌ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುತ್ತಿದ್ದಾರೆ ಎಂದು ಬಿಜೆಪಿ ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಘಟಕದ ಮುಖಂಡ ಕೆ.ವಿ. ಶಿವಪ್ಪ ಹೇಳಿದರು.

Advertisement

ಚಂದಾಪುರದಲ್ಲಿ ಬಿಜೆಪಿ ಘಟಕದಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿರುವುದು ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸ. ಬಿಜೆಪಿ ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಈ ರೀತಿ ಮಾಡಿದ್ದಾರೆ. ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ಆರೋಪ-ಪ್ರತ್ಯಾರೋಪ ಕೇಳಿ ಬರುವುದು ಸಾಮಾನ್ಯ. ಆದರೆ, ಅದನ್ನೇ ದೊಡ್ಡದನ್ನಾಗಿ ಮಾಡಿ ಕೆಲವರು ಆನೇಕಲ್‌ ತಾಲೂಕಿನ ಬಿಜೆಪಿ ಮುಖಂಡರ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ನಮ್ಮ ಆದ್ಯತೆ 2023ರಲ್ಲಿ ಆನೇಕಲ್‌ ತಾಲೂಕಿನಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿಕೊಂಡು ಬರುವುದು. ನೆರಳೂರು ಗ್ರಾಪಂ ಅಧ್ಯಕ್ಷೆ ಭಾರತಮ್ಮ ನಾಗರಾಜು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಿಗೆ ಚುನಾವಣೆ ಸಂದರ್ಭದಲ್ಲಿ ಹಣ ನೀಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ಆದರೆ, ಈಗಾಗಲೇ ಭಾರತಮ್ಮ ನಾನು ಯಾವುದೇ ಹಣವನ್ನು ಯಾರಿಗೂ ಕೊಟ್ಟಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಎಂದರು.

ಹಿರಿಯರ ಮಾರ್ಗದರ್ಶನ: ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಎಸ್‌ಆರ್‌ಟಿ ಅಶೋಕ್‌ ಮಾತನಾಡಿ, ತಾಲೂಕಿನಲ್ಲಿ 24 ತಿಂಗಳು ನಿರಂತರವಾಗಿ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಕೆಲಸಕ್ಕೂ ಹಿರಿಯರ ಮಾರ್ಗದರ್ಶನ ಪಡೆದು ಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ಎರಡು ಬಾರಿ ಬಿಜೆಪಿ ಶಾಸಕರನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕೆಲಸ ಮಾಡುತ್ತೇವೆ. ತಾಲೂಕಿನಲ್ಲಿ ರೆಡ್ಡಿ ಜನಾಂಗ ಪ್ರಬಲವಾಗಿದೆ ಎನ್ನುವ ಕಾರಣಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಇದನ್ನು ಸಹಿಸದ ಕೆಲವರು ಹಿಂಬದಿಯ ರಾಜಕಾರಣವನ್ನು ಮಾಡಲು ನೋಡುತ್ತಿರುವುದರಿಂದ ಕೆಲವು ಗೊಂದಲಗಳಾಗಿದ್ದು, ಈಗ ಎಲ್ಲವೂ ಕೂಡ ಸರಿ ಹೋಗಿದೆ ಎಂದರು.

ಹೆಸರು ಹೇಳದೆ ಜಿಲ್ಲಾಧ್ಯಕ್ಷರ ವಿರುದ್ಧ ಆರೋಪ: ಇತ್ತೀಚಿಗೆ ಆನೇಕಲ್‌ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷರಾದ ಎನ್‌. ಶಂಕರ್‌ ಹಾಗೂ ಎಸ್‌ಆರ್‌ಟಿ ಅಶೋಕ್‌ ಅವರನ್ನು ಆನೇಕಲ್‌ ಮಂಡಳ ಅಧ್ಯಕ್ಷ ಸ್ಥಾನದಿಂದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಎನ್‌.ಆರ್‌. ರಮೇಶ್‌ ವಜಾ ಮಾಡಿದ್ದರು. ಇದಾದ ಬಳಿಕ ಹೊಸ ಅಧ್ಯಕ್ಷರ ನೇಮಕವನ್ನು ಕೂಡ ಕೆಲವೇ ದಿನಗಳಲ್ಲಿ ಮಾಡಲಾಗುತ್ತದೆ ಎಂದು ಸ್ವತಃ ರಮೇಶ್‌ ಹೇಳಿಕೆ ನೀಡಿದ್ದರು. ಆದರೆ, ಇದಾದ ಬಳಿಕ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಆನೇಕಲ್‌ ತಾಲೂಕಿನಲ್ಲಿ ಜನಾಂಗದವರನ್ನು ಬಿಜೆಪಿಯವರು ತುಳಿಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

Advertisement

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಯೂ ಜಿಲ್ಲಾ ಅಧ್ಯಕ್ಷ ಎನ್‌. ಆರ್‌. ರಮೇಶ್‌ ಹೆಸರನ್ನು ವೇದಿಕೆಯಲ್ಲಿದ್ದ ಯಾರೊಬ್ಬರೂ ಕೂಡ ಉಲ್ಲೇಖೀಸದೆ ಗಂಭೀರ ಆರೋಪ ಮಾಡುತ್ತಿದ್ದಿದ್ದರು. ಆನೇಕಲ್‌ ತಾಲೂಕು ಘಟಕದ ಬಿಜೆಪಿ ಮಾಜಿ ಅಧ್ಯಕ್ಷ ಎನ್‌. ಬಸವರಾಜು, ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಯಂಗಾರೆಡ್ಡಿ, ಎನ್‌. ಶಂಕರ್‌, ಬಿಬಿಐ ರೆಡ್ಡಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next