ಕುಂದಾಪುರ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಮೂರನೇ ದಿನವಾದ ಬುಧವಾರ ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಪರೀಕ್ಷೆ ನಡೆದಿದ್ದು, ಎಲ್ಲ ಕಡೆಗಳಲ್ಲಿ ಯಾವುದೇ ಗೊಂದಲವಿಲ್ಲದೆ, ಸುಸೂತ್ರವಾಗಿ ಮುಕ್ತಾಯಗೊಂಡಿತು.
ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ದ್ವಿತೀಯ ಭಾಷೆ ಕನ್ನಡ ಪರೀಕ್ಷೆ ನಿಗದಿಯಾಗಿತ್ತು.
ಪ್ರಶ್ನೆಪತ್ರಿಕೆಗಳಲ್ಲಿ ಯಾವುದೇ ಗೊಂದಲ ಇರಲಿಲ್ಲ. 2 ಅಂಕಗಳ ಪರೀಕ್ಷೆ ಸ್ವಲ್ಪ ಮಟ್ಟಿಗೆ ಕಠಿನವಾಗಿತ್ತು, ಉಳಿದಂತೆ ಪರವಾಗಿರಲಿಲ್ಲ ಎನ್ನುವ ಮಾತುಗಳು ವಿದ್ಯಾರ್ಥಿ ವಲಯದಿಂದ ವ್ಯಕ್ತವಾಯಿತು.ಆಂಗ್ಲ ಭಾಷೆಯ ಪ್ರಶ್ನೆಪತ್ರಿಕೆ ಸಮತೋಲಿತವಾಗಿತ್ತು. ಉತ್ತಮ ಪ್ರಶ್ನೆ ಪತ್ರಿಕೆ ಇದಾಗಿತ್ತು ಎನ್ನುವ ಅಭಿಪ್ರಾಯ ಶಿಕ್ಷಕರ ವಲಯದಿಂದ ಮೂಡಿದೆ.
623 ಮಂದಿ ಗೈರು
ಮಂಗಳೂರು/ಉಡುಪಿ: ಎಸೆಸೆಲ್ಸಿ ಪರೀಕ್ಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ 623 ಮಂದಿ ಗೈರಾಗಿದ್ದಾರೆ.
ದ.ಕ.ದಲ್ಲಿ 449 ಮಂದಿ ಗೈರಾಗಿದ್ದರು. ಇಂಗ್ಲಿಷ್ ಪರೀಕ್ಷೆಯಲ್ಲಿ 22,831 ವಿದ್ಯಾರ್ಥಿಗಳ ಪೈಕಿ 22,424 ಮಂದಿ ಹಾಜರಾಗಿದ್ದು, 407 ಮಂದಿ ಗೈರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 6,705ರ ಪೈಕಿ 6,663 ವಿದ್ಯಾರ್ಥಿಗಳು ಹಾಜರಾಗಿದ್ದು, 42 ಮಂದಿ ಗೈರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 13,694 ವಿದ್ಯಾರ್ಥಿಗಳ ಪೈಕಿ 13,520 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 174 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.