Advertisement
ಮಂಗಳವಾರ ವಿಧಾನಸೌಧದಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ಜನರು ಶಾಂತಿ ನೆಮ್ಮದಿಯ ಜೀವನ ನಡೆಸುವ ವಾತಾವರಣ ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ್ದೇವೆ.
Related Articles
Advertisement
ಪೊಲೀಸ್ ಅಧಿಕಾರಿಗಳು ಹೊಸ ಸರ್ಕಾರದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ಹೇಳಿದ್ದೇವೆ. ದಕ್ಷತೆ, ಪ್ರಾಮಾಣಿಕತೆ ಇನ್ನು ಹೆಚ್ಚಾಗಬೇಕು. ಜನಸ್ನೇಹಿ ಆಗಿ ಕೆಲಸ ಮಾಡಬೇಕು. ಅಪರಾಧಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ ಏನೇನು ಸವಾಲು ಇದೆ ಎನ್ನುವುದನ್ನು ಹೇಳಿದ್ದೇನೆ. ಪೊಲೀಸ್ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ ಏನೆನಿದೆ ಅದನ್ನು ಮುಂದುವರೆಸುವ ಭರವಸೆ ನೀಡಿದ್ದೇನೆ. ಭೂಮಾಫಿಯಾ ಜೊತೆ ಪೋಲಿಸರು ಕೈಜೋಡಿಸುವುದನ್ನು ಸಹಿಸೋದಿಲ್ಲ ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ ಇಲಾಖೆಯ ಸುಧಾರಣೆ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಬೆಂಬಲ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದರು.
ಇಲಾಖೆಯು ಅಪರಾಧ ಪ್ರಕರಣಗಳ ಶೀಘ್ರ ತನಿಖೆಗೆ ಆದ್ಯತೆ ನೀಡಬೇಕು. ಇದರಲ್ಲಿ ವಿಳಂಬ ಧೋರಣೆ ಸಲ್ಲದು ಎಂದು ತಿಳಿಸಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.