ಹುಬ್ಬಳ್ಳಿ: ಸಚಿವರ ವಿರುದ್ಧ ಶಾಸಕರು ಅಸಮಾಧಾನಗೊಂಡ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಶಾಸಕರಿಂದ ಯಾವುದೇ ದೂರು ಸಹ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾಗಿ ಕೇವಲ ಎರಡು ತಿಂಗಳಾಗಿದೆ. ಇದುವರೆಗೆ ಯಾರು ಆ ಬಗ್ಗೆ ದೂರು ನೀಡಿಲ್ಲ ಎಂದರು.
ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ವಾರವೇ ಸಭೆ ಕರೆಯಬೇಕಿತ್ತು. ಆದರೆ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಮತ್ತು ಅವರೆ ಸಭೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸಭೆ ನಡೆಸಿಲ್ಲ. ಗುರುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ ಎಂದರು.
ಸರ್ಕಾರ ಅತಂತ್ರಗೊಳಿಸುವ ನಿಟ್ಟಿನಲ್ಲಿ ಸಿಂಗಾಪುರದಲ್ಲಿ ಪ್ಲಾನ್ ನಡಿಯುತ್ತಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡದ ಅವರು, ಇದನ್ನು ಅವರಿಗೆ ಕೇಳಿ ಎಂದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೆಡಿಎಸ್ ನವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಏನೋ ಮಾತುಕತೆ ನಡೆಸುತ್ತಾ ಇದ್ದಾರೆ. ಆದರೆ, ನಾವು ರಾಜ್ಯದಲ್ಲಿ 15ರಿಂದ 20 ಸ್ಥಾನ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.