Advertisement

ಮೂರು ತಿಂಗಳಾದ್ರೂ ಕೊಟ್ಟಿಲ್ಲ ಪರಿಹಾರ

12:51 PM Nov 05, 2019 | Team Udayavani |

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ನಮ್ಮ ಮನೆಗಳು ಕುಸಿದು ಬಿದ್ದು ಮೂರು ತಿಂಗಳಾಯಿತು. ಪರಿಹಾರ ಕೊಡಿ ಎಂದು ನಿತ್ಯವೂ ಕಚೇರಿಗೆ ಅಲೆಯುತ್ತಿದ್ದೇವೆ. ಬಿದ್ದ ಮನೆಯಲ್ಲೇ ವಾಸವಾಗಿದ್ದು, ಕೂಡಲೇ ನಮಗೆ ಪರಿಹಾರ ನೀಡಿ, ಹೊಸ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಬೇಕು ಎಂದು ಆಗ್ರಹಿಸಿ ಬಾದಾಮಿ ತಾಲೂಕು ನಂದಿಕೇಶ್ವರದ ನೆರೆ ಸಂತ್ರಸ್ತ ಮಹಿಳೆಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

Advertisement

ಕಳೆದ ಮೂರು ತಿಂಗಳ ಹಿಂದೆ ಮಲಪ್ರಭಾ ನದಿ ಉಕ್ಕಿ ಹರಿದಿತ್ತು. ನದಿಯ ಪಕ್ಕದಲ್ಲಿರುವ ನಂದಿಕೇಶ್ವರ ಗ್ರಾಮದಎಸ್‌.ಸಿ. ಕಾಲೋನಿ ಸಂಪೂರ್ಣಜಲಾವೃತಗೊಂಡಿತ್ತು. ವಾರಗಟ್ಟಲೇ ನೀರಿನಲ್ಲಿ ನಿಂತಿದ್ದ ನಮ್ಮ ಮನೆಗಳು ಕುಸಿದು ಬಿದ್ದಿವೆ. ಅಧಿಕಾರಿಗಳು, ಬರೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳು ಕೇಳಿದ ಎಲ್ಲ ದಾಖಲೆಯೂ ಕೊಟ್ಟಿದ್ದೇವೆ. ಈ ವರೆಗೆ ಪರಿಹಾರ ಕೊಟ್ಟಿಲ್ಲ. ನಿತ್ಯ ದುಡಿದು ಜೀವನ ನಡೆಸುವ ನಾವು, ಬಿದ್ದ ಮನೆಯಲ್ಲೇ ವಾಸಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೇ ನಮಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಕಳೆದ 2009ರಲ್ಲೂ ಪ್ರವಾಹ ಬಂದಾಗ ನಮ್ಮ ಮನೆಗಳು ಮುಳುಗಿದ್ದವು. ಆಗ ಆಸರೆ ಮನೆಗಳನ್ನು ಕೆಲವರಿಗೆ ಕೊಟ್ಟು, ಇನ್ನೂ ಕೆಲವರಿಗೆ ಕೊಡಲಿಲ್ಲ. ಆಸರೆ ಮನೆಗಳಿಗೆ ವಿದ್ಯುತ್‌, ರಸ್ತೆ, ಕುಡಿಯುವ ನೀರು ಯಾವುದೂ ಇರಲಿಲ್ಲ. ಹೀಗಾಗಿ ಹಲವಾರು ಜನ ಆಸರೆ ಮನೆಗಳಿಗೆ ಹೋಗಲಿಲ್ಲ.

ಈಚೆಗೆ ಪ್ರವಾಹ ಬಂದಾಗ ಕೆಲವರು, ಆಸರೆ ಮನೆಗಳಿಗೆ ಹೋಗಿದ್ದಾರೆ. ಆಸರೆ ಮನೆ ಕೊಟ್ಟಿದ್ದೇವೆ ಎಂದು ನಮ್ಮನ್ನು ಪರಿಹಾರದಿಂದ ವಂಚಿತ ಮಾಡಿದರೆ, ನಮ್ಮ ಬದುಕು ಬೀದಿ ಪಾಲಾಗಲಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ನಂದಿಕೇಶ್ವರ ಗ್ರಾಮದ ನೆರೆ ಸಂತ್ರಸ್ತ ಮಹಿಳೆಯರಾದ ಹನಮವ್ವ ಕಡ್ಡಿಗುಡ್ಡ, ಹುಲಿಗೆವ್ವ ಬಂಡಿವಡ್ಡರ, ಹನಮವ್ವ ವಡ್ಡರ, ತಿಪ್ಪವ್ವ ಈಳಗೇರ, ಶಾವಕ್ಕ ಪಾತ್ರೋಟಿ, ಶೇಖವ್ವ ಅಂಬಿಗೇರ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next