ರೋಣ: ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿನೇ ದಿನೇ ಗಾಂಧೀಜಿ ಸ್ವಚ್ಛ ಭಾರತದ ಕನಸ್ಸನ್ನು ನನಸು ಮಾಡೋಣ ಎಂದು ಹೊಸ ಕಾರ್ಯಕ್ರಮ ರೂಪಿಸುತ್ತಿದೆ. ಆದರೆ ತಾಲೂಕಿನ ಶಾಂತಗೇರಿ ಗ್ರಾಮಕ್ಕೂ ಸ್ವಚ್ಛತೆಗೂ ಅಷ್ಟಕಷ್ಟೇ ಸಂಬಂಧ ಎಂಬಂತೆ ಕಂಡು ಬರುತ್ತಿದೆ. ಎಲ್ಲಿ ನೋಡಿದರೂ ಕಸದ ರಾಶಿ, ತಿಪ್ಪೆ ಗುಂಡಿಗಳ ದರ್ಶನವಾಗುತ್ತಿದೆ.
ಇದು ಸೂಡಿ ಜಿಪಂ ಸದಸ್ಯೆ ಮಂಜುಳಾ ಹುಲ್ಲಣ್ಣವರ ತವರೂರಾದ ಶಾಂತಗೇರಿ ಗ್ರಾಮದ ವಾಸ್ತವ್ಯ ಸ್ಥಿತಿ. ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಶಾಂತಗೇರಿ ಮಾರ್ಗವಾಗಿ ಹಿರೇಹಾಳ ಗ್ರಾಮಕ್ಕ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ.
ಸೂಕ್ತವಾದ ಚರಂಡಿ ಇರದ ಕಾರಣ, ಇತ್ತೀಚೆಗೆ ಸುರಿದ ಮಳೆಗೆ ನೀರು ಎಲ್ಲೆಂದರಲ್ಲಿ ನಿಂತು ಗಬ್ಬು ನಾರುತ್ತಿದೆ. ಸೂಡಿ ಜಿಪಂ ಮತಕ್ಷೇತ್ರಕ್ಕೆ ಶಾಂತಗೇರಿ ಗ್ರಾಮದವರೇ ಹೆಚ್ಚು ಆಯ್ಕೆಯಾಗಿದ್ದಾರೆ. ಆದರೆ ಗ್ರಾಮದ ಅಭಿವೃದ್ಧಿ ಶೂನ್ಯ ಎನ್ನುತ್ತಾರೆ ಗ್ರಾಮಸ್ಥರು. ಏಕೆಂದರೆ ಎರಡು ಮನೆತನಗಳೇ ಇಲ್ಲಿ ನಡೆಯುವ ತಾಪಂ, ಜಿಪಂ ಚುನಾವಣೆಯಲ್ಲಿ ಹಿಡಿತ ಸಾಧಿಸುತ್ತ ಬಂದಿವೆ. ಈ ಹಿಂದೆ ಈರವ್ವ ಹಟ್ಟಿಮನಿ ಎಂಬುವವರು ಜಿಪಂ ಸದಸ್ಯರಾಗಿ, ರೇಣುಕಾ ಹಟ್ಟಿಮನಿ ತಾಪಂ ಅಧ್ಯಕ್ಷರಾಗಿ, ಅಲ್ಲದೆ ಈಗಿರುವ ಜಿಪಂ ಸದಸ್ಯರಾದ ಮಂಜುಳಾ ಹುಲ್ಲಣ್ಣವರ ಇದಕ್ಕೂ ಮೊದಲು ತಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ ಗ್ರಾಮ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗು ಗ್ರಾಮದ ಜನರನ್ನು ಕಾಡುತ್ತಿದೆ.
ಗ್ರಾಮಕ್ಕಿಲ್ಲ ಬಸ್ ನಿಲ್ದಾಣ: ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಗಿದ್ದ ಬಸ್ ನಿಲ್ದಾಣ ಈಗ ಹಾಳಾಗಿ ಹೋಗಿದೆ. ಅಲ್ಲದೆ ಕೆಲವು ಗ್ರಾಮದ ಹಿರಿಯರು ಇದರಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಆದರೆ ಇದು ಯಾವಾಗ ಬೀಳುತ್ತೂ ಗೊತ್ತಿಲ್ಲ. ಅದನ್ನು ಕೆಡವಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುವುದು ಇಲ್ಲಿನ ಜನರ ಒತ್ತಾಯ.
ಸರ್ಕಾರಿ ಆಸ್ಪತ್ರೆಗಿಲ್ಲ ಸೂಕ್ತ ಚರಂಡಿ: ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತು ತಡೆಗೋಡೆ ಇದೆ. ಆದರೆ ಗ್ರಾಮದಿಂದ ಬರುವ ಕೊಳಚೆ ನೀರು ಈ ಆಸ್ಪತ್ರೆ ಹಿಂದೆ ಹಾದು ಹೋಗುತ್ತದೆ. ಅಲ್ಲದೆ ಇತ್ತೀಚೆಗೆ ಸುರಿದ ಬಾರಿ ಮಳೆಗೆ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದೆ. ನೀರಿನಲ್ಲಿ ಕಸ ಕಡ್ಡಿ ಕೊಳೆತು ಗಬ್ಬೆದ್ದು ನಾರುತ್ತಿದೆ.
ಇದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸರಿಪಡಿಸಬೇಕಾದ ಗ್ರಾಪಂ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ. ತಿಪ್ಪೆಗುಂಡಿಗಳ ತಾಣ: ಶಾಂತಗೇರಿ ಗ್ರಾಮದಿಂದ ಬಳಗೋಡ, ಹಿರೇಹಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂದೆ ರಸ್ತೆ ತುಂಬೆಲ್ಲ ತಿಪ್ಪೆ ಹಾಕಲಾಗಿದೆ. ರಸ್ತೆಯಲ್ಲಿ ಪ್ರಯಾಣ ಬೆಳೆಸುವವರಿಗೆ ದೊಡ್ಡ ಕಿರಿಕಿರಿ ಉಂಟಾಗಿದೆ.
ನಮ್ಮೂರಿಂದ ಅನೇಕರು ರಾಜಕೀಯವಾಗಿ ದೊಡ್ಡ ದೊಡ್ಡ ಮಟ್ಟಕ್ಕೆ ಹೋಗಿದ್ದಾರೆ. ಆದರೆ ಗ್ರಾಮ ನೆನೆಸುವಂತಹ ಕೆಲಸ ಯಾರು ಮಾಡಿಲ್ಲ. ಸುವ್ಯವಸ್ಥಿವಾದ ಬಸ್ ನಿಲ್ದಾಣ ಗ್ರಾಮದಲ್ಲಿಲ್ಲ. ನಮ್ಮೂರಿಗೆ ಬರುವ ಬೀಗರು, ಸಂಬಂ ಧಿಕರು ರಸ್ತೆಯಲ್ಲಿಯೇ ನಿಂತು ಬಸ್ ಹತ್ತಬೇಕಾದ ಸ್ಥಿತಿ ಬಂದಿದೆ
.-ಶಾಂತಪ್ಪ ಜಾಲಿಹಾಳ, ಶಾಂತಗೇರಿ ಗ್ರಾಮಸ್ಥ
ಶಾಂತಗೇರಿ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಸ್ಥಳದ ಸಮಸ್ಯೆಯಾಗಿತ್ತು. ಬಸ್ ನಿಲ್ದಾಣ ನಿರ್ಮಿಸಿದರೆ ಸರ್ಕಾರಿ ಆಸ್ಪತ್ರೆಗೆ ಜಾಗದ ಕೊರತೆಯಾಗುತಿತ್ತು. ಅದಕ್ಕೆ ಬೇರೆ ಸ್ಥಳದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು
. -ಮಂಜುಳಾ ಹುಲ್ಲಣ್ಣವರ, ಸೂಡಿ ಜಿಪಂ ಸದಸ್ಯೆ
ಯಚ್ಚರಗೌಡ ಗೋವಿಂದಗೌಡ