Advertisement

ಶಾಲಾ ಆವರಣದಲ್ಲೇ ಬಹಿರ್ದೆಸೆ!

01:05 PM Dec 18, 2019 | Team Udayavani |

ಗದಗ: ಶಿಕ್ಷಣ ಇಲಾಖೆ ಅಧಿಕಾರಿಗಳ ನಿಷ್ಕಾಳಜಿ ಹಾಗೂ ಸ್ಥಳೀಯರ ಬೇಜವಾಬ್ದಾರಿಯಿಂದಾಗಿ ಇಲ್ಲಿನ ಬೆಟಗೇರಿಯ ಸರಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂ. 4 ಸಂಜೆಯಾಗುತ್ತಿದ್ದಂತೆ ಬಯಲು ಬಹಿರ್ದೆಸೆ ಹಾಗೂ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ಪರಿಣಾಮ ಒಂದೇ ಆವರಣದಲ್ಲಿರುವ ಪ್ರಾಥಮಿಕ ಶಾಲೆ ಹಾಗೂ ಎರಡು ಅಂಗನವಾಡಿ ಕೇಂದ್ರಗಳ ಕಂದಮ್ಮಗಳು ದುರ್ವಾಸನೆ ಮಧ್ಯೆಯೇ ದಿನವಿಡೀ ಕಾಲ ಕಳೆಯುವಂತಾಗಿದೆ.

Advertisement

ಬೆಟಗೇರಿಯ ಮಂಜುನಾಥ ನಗರದ ಸರಕಾರಿ ಕಿರಿಯ ಹೆಣ್ಣು ಮಕ್ಕಳ ಶಾಲೆ ನಂ. 4ರಲ್ಲಿ 1ರಿಂದ 5ನೇ ತರಗತಿ ವರೆಗೆ ಸುಮಾರು 43 ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಇದೇ ಶಾಲಾ ಆವರಣದಲ್ಲಿ ಗೌರಿ ಗಡಿ ಶಾಲಾ ಓಣಿ ಅಂಗನವಾಡಿ ಹಾಗೂ ಮಂಜುನಾಥ ನಗರದ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕ್ರಮವಾಗಿ 15 ಹಾಗೂ 25 ಪುಟ್ಟ ಮಕ್ಕಳು ಪ್ರತಿನಿತ್ಯ ಅಂಗನವಾಡಿಗೆ ಆಗಮಿಸುತ್ತಾರೆ. ಅದರೊಂದಿಗೆ ಮಾತೃ ವಂದನಾ ಯೋಜನೆಯಡಿ ಗರ್ಭಿಣಿಯರು ಕೂಡಾ ಅಂಗನವಾಡಿಗೆ ಆಗಮಿಸುತ್ತಾರೆ. ಆದರೆ, ಶಾಲಾ ಸಮೀಪಕ್ಕೆ ಬರುತ್ತಿದ್ದಂತೆ ದುರ್ವಾಸನೆ ಶುರುವಾಗುತ್ತಿದ್ದು, ಶಾಲಾ ಆವರಣದೊಳಗೆ ಕಾಲಿಡುತ್ತಿದ್ದಂತೆ ಉಸಿರು ಬಿಗಿ ಹಿಡಿದುಕೊಂಡೇ ಕೊಠಡಿ ಪ್ರವೇಶಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಶಾಲಾ ಆವರಣದಲ್ಲಿ ಬಹಿರ್ದೆಸೆ: ಶಾಲಾ ಸುತ್ತಮುತ್ತಲಿನ ಪ್ರದೇಶದ ಕೆಲವರ ಮನೆಗಳಲ್ಲಿ ಶೌಚಾಲಯಗಳಿಲ್ಲ. ಇದ್ದವರೂm ಅವುಗಳನ್ನು ಬಳಕೆ ಮಾಡುತ್ತಿಲ್ಲ. ಹೀಗಾಗಿ ಕತ್ತಲು ಆವರಿಸುತ್ತಿದ್ದಂತೆ ಬಹಿರ್ದೆಸೆಗೆ ಚೆಂಬು ಹಿಡಿದು ಶಾಲಾ ಆವರಣದತ್ತ ಹೆಜ್ಜೆ ಹಾಕುತ್ತಾರೆ. ಶನಿವಾರ, ಭಾನುವಾರ ಹಾಗೂ ಸರಣಿ ರಜಾ ದಿನಗಳ ಬಳಿಕ ಶಾಲೆಗೆ ಆಗಮಿಸುವ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಆವರಣ ಸ್ವಚ್ಛಗೊಳಿಸುವುದೇ ದೊಡ್ಡ ಸವಾಲಾಗುತ್ತದೆ. ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಎಡ ಹಾಗೂ ಬಲ ಬದಿಯಲ್ಲಿ ಎರಡು ಅಂಗನವಾಡಿಗಳಿದ್ದು, ಇದೇ ಭಾಗದಲ್ಲಿ ಗಲೀಜು ಮಾಡುತ್ತಾರೆ. ಕೆಲವೊಮ್ಮೆ ಕಿಡಿಗೇಡಿಗಳು ಅಂಗನವಾಡಿ ಮೆಟ್ಟಿಲುಗಳಲ್ಲೇ ಮಲ- ಮೂರ್ತ ವಿಸರ್ಜನೆ ಮಾಡುತ್ತಾರೆ. ಶಾಲೆ- ಅಂಗನವಾಡಿ ವಾತಾವರಣವೇ ಇಷ್ಟೊಂದು ದುಸ್ಥಿತಿಯಲ್ಲಿದ್ದರೆ, ಯಾವ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ನಾವು ಹೇಗೆ ಕೆಲಸ ಮಾಡಬೇಕು ಎಂದು ಪ್ರಶ್ನಿಸುತ್ತಾರೆ ಮಂಜುನಾಥ ನಗರ ಅಂಗನವಾಡಿ ಕಾರ್ಯಕರ್ತೆ ಎಂ. ಜಾಲಿಹಾಳ.

ಈ ಶಾಲೆಗೆ ಗೇಟ್‌ ಇಲ್ಲದೇ ಇರುವುದರಿಂದ ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ಶಾಲೆ ಆವರಣದಲ್ಲಿ ನಿಲ್ಲುವುದರಿಂದ ಮಕ್ಕಳು ಶಾಲೆಯ ಒಳಗೆ ಹೋಗಲು ತೊಂದರೆ ಪಡುತ್ತಾರೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಮುಂಭಾಗದ ವಿದ್ಯುತ್‌ ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಬೇಕು. –ಆರ್‌.ಎಲ್‌. ಮೇಳೇನವರ, ಸಾಮಾಜಿಕ ಕಾರ್ಯಕರ್ತ

 

Advertisement

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next