Advertisement

ಸ್ವಚ್ಛತೆ ಕಾಣದ ಮಿನಿ ವಿಧಾನಸೌಧದ ಆವರಣ

12:56 PM Jul 14, 2019 | Suhan S |

ಶ್ರೀರಂಗಪಟ್ಟಣ: ನಮ್ಮ ಮನೆಯ ಮುಂಭಾಗ ಕಸದ ರಾಶಿ ಬಿದ್ದಿದೆ ವಿಲೇವಾರಿ ಮಾಡಿ. ಬಡಾವಣೆ ಖಾಲಿ ಜಾಗದಲ್ಲಿ ಗಿಡಗಂಟಿಗಳು ಬೆಳೆದಿವೆ ತೆರವುಗೊಳಿಸಿ ಎಂದು ಜನಸಾಮಾನ್ಯರು ಅಧಿಕಾರಿಗಳಿಗೆ ಮನವಿ ಮಾಡುವುದು ಸಾಮಾನ್ಯ. ಆದರೆ, ಪಟ್ಟಣದ ಮಿನಿ ವಿಧಾನಸೌಧದ ಅಧಿಕಾರಿಗಳು ಇದಕ್ಕೆ ತದ್ವಿರುದ್ಧ ಎಂಬಂತಾಗಿದೆ.

Advertisement

ಇಲ್ಲಿನ ಮಿನಿ ವಿಧಾನಸೌಧದ ಒಳಾವರಣದಲ್ಲೇ ಕಸದ ರಾಶಿ ಬಿದ್ದಿದ್ದು ಕೊಠಡಿ ಕಿಟಕಿ ಪಕ್ಕದಲ್ಲೇ ಗೋಚರವಾಗುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೇ, ತಾಲೂಕು ಕಚೇರಿ ಆವರಣದ ಸುತ್ತಲೂ ಹುಲ್ಲು ಗಿಡ ಗಂಟಿಗಳು ಬೆಳೆದರೂ ತಮಗೆ ಸಂಬಂಧವೇ ಇಲ್ಲದಂತೆ ನಿರ್ಲಕ್ಷ್ಯಿಸುತ್ತಿದ್ದಾರೆ.

ಇದರಿಂದಾಗಿ ನಾಗರಿಕರು ಕಚೇರಿ ಒಳಗೆ ಬರಲು ಭಯದಿಂದಲೇ ಆಗಮಿಸಿ ತಮ್ಮ ತಮ್ಮ ಕೆಲಸ- ಕಾರ್ಯಗಳನ್ನು ಮುಗಿಸಿಕೊಂಡು ತೆರಳುತ್ತಿದ್ದಾರೆ. ಮಿನಿ ವಿಧಾನಸೌಧದಲ್ಲಿ ಜಮೀನಿನ ಪಹಣಿ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡುವ ಜಾಗದಲ್ಲಿ ಅಪಾರ ಪ್ರಮಾಣದ ಹುಲ್ಲು ಗಿಡ ಬೆಳೆದು ನಿಂತಿವೆ. ಇದರ ಪಕ್ಕದಲ್ಲೇ ತ್ಯಾಜ್ಯ ಬಿದ್ದಿದೆ. ಉಪ ಖಜಾನೆ ಪಕ್ಕದ ಜಾಗವೂ ಕಸದ ತೊಟ್ಟಿಯಾಗಿದೆ.

ನೆಲ ಮಹಡಿಯಲ್ಲಿ ಮಳೆ ನೀರು: ಕಚೇರಿ ಸುತ್ತಲೂ ಇರುವ ಪ್ರದೇಶದಲ್ಲಿ ಗಿಡ, ಗಂಟಿಗಳು ಬೆಳೆದಿದ್ದು ಹಾವು, ಚೇಳು, ಹಲ್ಲಿಗಳು ಕಾಣಿಸಿಕೊಳ್ಳುತ್ತಿವೆ. ಸ್ವಲ್ಪ ಮಳೆ ಬಿದ್ದರೂ ಕಂದಾಯ ನಿರೀಕ್ಷಕರ ಕಚೇರಿ ಇರುವ ನೆಲ ಮಹಡಿಯಲ್ಲಿ ನೀರು ಮಡುಗಟ್ಟಿ ನಿಲ್ಲುತ್ತದೆ.

Advertisement

ಬೇಸರ: ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ ಕಚೇರಿ ಮಾತ್ರವಲ್ಲದೆ ಉಪ ನೋಂದಣಿ, ಶಿಶು ಅಭಿವೃದ್ಧಿ ಇಲಾಖೆ, ಚುನಾವಣಾ ಶಾಖೆ, ಸರ್ವೆ ಇಲಾಖೆ, ಆಹಾರ ನಿರೀಕ್ಷಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಸೇರಿ 7-8 ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಪ್ರತಿ ದಿನ ನೂರಾರು ಮಂದಿ ತಮ್ಮ ಕೆಲಸಗಳಿಗೆ ಇಲ್ಲಿಗೆ ಬರುತ್ತಾರೆ. ಹಾಗೆಯೇ ಬರುವವರು ಅವ್ಯವಸ್ಥೆ ಕಂಡು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.

ಕಾಲಿಡಲು ಆಗುತ್ತಿಲ್ಲ: ಕಳೆದ 10 ವರ್ಷಗಳ ಹಿಂದೆ 6 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರು, ಇತರೆ ಸಾರ್ವಜನಿಕರು ಹೊರ ನಿಂತು ನೋಡಿದರೆ ಭವ್ಯ ಕಟ್ಟಡದಂತೆ ಕಂಡರೂ ಒಳಗೆ ಕಸದ ರಾಶಿ ಬಿದ್ದಿದೆ. ಕಚೇರಿ ಹಿಂದೆ ಮತ್ತು ಎಡ ಬಲದಲ್ಲಿ ಕಾಲಿಡಲು ಆಗದಂತೆ ದಟ್ಟ ಪೊದೆಗಳು ಬೆಳೆದು ನಿಂತಿವೆ.

ಕುಳಿತುಕೊಳ್ಳಲು ಮಿನಿ ವಿಧಾನ ಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಕೂರುವ ಸ್ಥಿತಿ ಇದೆ. ಕೂಡಲೇ ತಹಶೀಲ್ದಾರರು ಕಚೇರಿ ಅವ್ಯವಸ್ಥೆ ಸರಿಪಡಿಸಬೇಕು, ಬರುವ ಸಾರ್ವಜನಿಕರಿಗೆ ಮೂಲ ಭೂತ ಸೌಕರ್ಯ ಒದಗಿಸಬೇಕು ಎಂದು ಕಸಾಪ ಮಾಜಿ ಕಾರ್ಯದರ್ಶಿ ಉಮಾಶಂಕರ್‌, ಪುರಸಭೆ ಸದಸ್ಯ ಎಂ.ನಂದೀಶ್‌, ಕರವೇ ಅಧ್ಯಕ್ಷ ಚಂದಗಾಲು ಶಂಕರ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next