ಹೊಸದಿಲ್ಲಿ: ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಧಾನಿಯ ಏಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೊಳಗಾಗಿರುವ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಆದರೆ ಆಸ್ಪತ್ರೆಯ ಮೂಲಗಳು ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಅರುಣ್ ಜೇಟ್ಲಿ ಅವರು ದಾಖಲಾಗಿರುವ ಏಮ್ಸ್ ಆಸ್ಪತ್ರೆಗೆ ಆದಿತ್ಯವಾರ ಬೆಳಿಗ್ಗೆಯಿಂದಲೇ ಕೇಂದ್ರ ಸಚಿವರು ಸೇರಿದಂತೆ ಹಲವಾರು ರಾಜಕೀಯ ನಾಯಕರು ದೌಡಾಯಿಸುತ್ತಲೇ ಇದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ತನ್ನ ಮಾಜೀ ಸಂಪುಟ ಸಹೋದ್ಯೋಗಿಯ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆದಿತ್ಯವಾರ ಸಾಯಂಕಾಲ 6.40ರ ಸುಮಾರಿಗೆ ರಾಜನಾಥ್ ಅವರು ಆಸ್ಪತ್ರೆಗೆ ಭೇಟಿ ನೀಡಿದರು.
ಏಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಜೇಟ್ಲಿ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.
ರವಿವಾರ ಜೇಟ್ಲಿ ಅವರ ಆರೋಗ್ಯ ವಿಚಾರಿಸಲು ಹಲವು ಗಣ್ಯರು ಆಸ್ಪತ್ರಗೆ ಭೇಟಿ ನೀಡಿದರು. ಅವರಲ್ಲಿ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗ್ವತ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ರಾಮ್ ವಿಲಾಸ್ ಪಾಸ್ವಾನ್, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಮುಂತಾದವರು ಪ್ರಮುಖರಾಗಿದ್ದರು.