Advertisement

ಜಾತಿ ಆಧಾರದ ವರ್ಗಾವಣೆ ಇಲ್ಲ

11:38 AM Jun 23, 2018 | Team Udayavani |

ಬೆಂಗಳೂರು: ಹೊಸ ಸರ್ಕಾರ ಬಂದ ಕೂಡಲೇ, ಜಾತಿ, ಧರ್ಮದ ಆಧಾರದಲ್ಲಿ ಪೊಲೀಸ್‌ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ವರ್ಗಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಆದರೆ, ಅಂತಹ ಮಾತಿಗೆ ಕಿವಿಗೊಡಬೇಡಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಶುಕ್ರವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಅವರು, ವರ್ಗಾವಣೆ ವಿಚಾರದಲ್ಲಿ ಪೊಲೀಸ್‌ ಇಲಾಖೆ ಅಧಿಕಾರಿಗಳು ಆತಂಕ ಪಡುವ ಅಗತ್ಯವಿಲ್ಲ. ಸದ್ಯ ಇರುವ ಅಧಿಕಾರಿಗಳ ಮೂಲಕವೇ ಕೆಲಸ ತೆಗೆಯುವುದು ನನಗೆ ಗೊತ್ತಿದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಕೆಲವರಿಗೆ ನಮ್ಮ ಸಮ್ಮಿಶ್ರ ಸರ್ಕಾರದ ಮೇಲೆ ಕಣ್ಣಿದೆ. ಒಂದು ವರ್ಷ ಇರುತ್ತೋ? ಅಥವಾ ಎರಡು ವರ್ಷ ಇರುತ್ತೋ ಎಂಬ ಬಗ್ಗೆ ಕುತೂಹಲವಿದೆ. ಹೀಗಾಗಿ ಬೇಕಾದ ಅಧಿಕಾರಿಗಳು ಆಯಾಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದಾರೆ.

ಆದರೆ, ಜಾತಿ, ಧರ್ಮದ ಆಧಾರದಲ್ಲಿ ಯಾವುದೇ ವರ್ಗಾವಣೆ ಮಾಡುವುದಿಲ್ಲ. ಹೀಗಾಗಿ ಸದ್ಯ ಇರುವ ಸ್ಥಳದಲ್ಲೇ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡಿ. ಒಂದು ವೇಳೆ ಕರ್ತವ್ಯ ಲೋಪವೆಸಗಿದರೆ ಯಾವುದೇ ಕಾರಣಕ್ಕೂ ಕ್ಷಮೆ ಇಲ್ಲ ಎಂದು ಸಿಎಂ ಎಚ್‌ಡಿಕೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಪ್ರಕರಣದ ತನಿಖೆ ಪ್ರಗತಿ ಕಂಡು ಇಡೀ ದೇಶವೇ ರಾಜ್ಯ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹೆಸರು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ನಿಮ್ಮ ಮೇಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ. ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಬೇಕು.

Advertisement

ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ರೌಡಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭೂಗತ ಚಟುವಟಿಕೆಗಳು ಹಾಗೂ ಅಕ್ರಮ ಶಸ್ತ್ರಾಸ್ತ್ರ ಕೊಂಡೊಯ್ಯುವ ವ್ಯಕ್ತಿಗಳ ವಿರುದ್ಧ ಹದ್ದಿನ ಕಣ್ಣಿಡಬೇಕು. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಬಗ್ಗೆ ನಗರ ಪೊಲೀಸ್‌ ಆಯುಕ್ತರು ಹೆಚ್ಚು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು ಎನ್ನಲಾಗಿದೆ.

ಬಾರ್‌ ಮುಂದೆ ಹೊಯ್ಸಳ, ಚಿತಾ ನಿಲ್ಲಿಸಬೇಡಿ: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ರಾತ್ರಿ ವೇಳೆ ಬಾರ್‌ ಮತ್ತು ವೈನ್‌ ಸ್ಟೋರ್‌ಗಳ ಎದುರು ಹೊಯ್ಸಳ  ಮತ್ತು ಚಿತಾ ವಾಹನಗಳನ್ನು ನಿಲ್ಲಿಸಬೇಡಿ. ಇದರಿಂದ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಈಗಾಗಲೇ ಪೊಲೀಸರು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪವಿದೆ. ಈ ಬಗ್ಗೆ ಆಯಾ ವರಿಷ್ಠಾಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next