Advertisement

ನೋ ಕಾಸ್ಟ್‌ ಇಎಂಐ ಮೇಲೇ ಎಲ್ಲರ ಐ!

02:47 PM Sep 03, 2018 | |

ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಕ್ಯಾಮೆರಾ, ರೆಫ್ರಿಜರೇಟರ್‌ಗಳು, ಸ್ಮಾರ್ಟ್‌ಫೋನ್‌ಗಳಿಗೆ ಈ ಕೊಡುಗೆ ಇರುತ್ತದೆ. ಅದರಲ್ಲೂ ಎಸ್‌ಬಿಐ, ಎಚ್‌ಡಿಎಫ್ಸಿ, ಎಕ್ಸಿಸ್‌, ಐಸಿಐಸಿಐ ಬ್ಯಾಂಕ್‌ನಂತಹ ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಪದೇ ಪದೆ ಈ ಸೌಲಭ್ಯ ನೀಡಲಾಗುತ್ತದೆ. ಯಾಕೆಂದರೆ ಈ ಬ್ಯಾಂಕ್‌ಗಳೇ ಹೆಚ್ಚಿನ ಸಂಖ್ಯೆಯ ಕ್ರೆಡಿಟ್‌ ಕಾರ್ಡ್‌ ಹೊಂದಿವೆ. ನೋ ಕಾಸ್ಟ್‌ ಇಎಂಐ  ಎಂಬುದು ಕೇವಲ ಕ್ರೆಡಿಟ್‌ ಕಾರ್ಡ್‌ಗಳ ಮೇಲಷ್ಟೇ ಕೊಡುವ ಕೊಡುಗೆ. ಅಂದರೆ ಕ್ರೆಡಿಟ್‌ ಕಾರ್ಡ್‌ ಇಲ್ಲದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.

Advertisement

ಒಂದು ಸ್ಮಾರ್ಟ್‌ಫೋನ್‌ ಖರೀದಿಸಬೇಕಿದೆ. ಆದರೆ ಒಂದೇ ಬಾರಿಗೆ 30-40 ಸಾವಿರ ದುಡ್ಡು ಹಾಕುವ ಮನಸಿಲ್ಲ. ಹಾಗಾದರೆ ಏನು ಮಾಡಲಿ ಎಂದು ಯೋಚಿಸುತ್ತಿದ್ದಾಗಲೇ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಗೀರುಗೀರಾದ ಸ್ಕ್ರೀನ್‌ನ ಮೇಲೆ ಆಕರ್ಷಕ ಫೋನ್‌ಗಳು ನೋ ಕಾಸ್ಟ್‌ ಇಎಂಐನಲ್ಲಿ ಲಭ್ಯ. ಇದು ವಿಶೇಷ ಕೊಡುಗೆ ಎಂಬ ನೋಟಿಫಿಕೇಶನ್‌ ಫ್ಲಿಪ್‌ಕಾರ್ಟ್‌ನಿಂದಲೋ ಅಥವಾ ಅಮೇಜಾನ್‌ನಿಂದಲೋ ಟಣ್‌ ಎಂದು ಸದ್ದು ಮಾಡುತ್ತಾ ಕಾಣಿಸಿಕೊಳ್ಳುತ್ತದೆ.

ಈ ನೋ ಕಾಸ್ಟ್‌ ಇಎಂಐ ಎಂಬುದು ಕಳೆದ ಎರಡು ವರ್ಷಗಳಿಂದ ಭಾರಿ ಚಾಲ್ತಿಯಲ್ಲಿದೆ. ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಜನಪ್ರಿಯವಾಗುವುದಕ್ಕೂ ಮೊದಲು, ಬಡ್ಡಿ ರಹಿತ ಸಾಲ ಎಂಬುದೊಂದು ಸಂಗತಿ ಪ್ರಚಾರದಲ್ಲಿತ್ತು. ಯಾವುದೇ ಮಳಿಗೆಯ ಎದುರು ನೋಡಿದರೂ ಬೃಹತ್‌ ಗಾತ್ರದ 0% ಎಂಬ ಬ್ಯಾನರ್‌ ಕಾಣಿಸುತ್ತಿತ್ತು. ಇದರಲ್ಲಿ ಕೆಲವು ಹಿಡನ್‌ ಚಾರ್ಜ್‌ಗಳನ್ನೆಲ್ಲ ಸೇರಿಸಿ ಕಂಪನಿಗಳು ಗ್ರಾಹಕರ ಮಂಡೆಗೆ ಎಣ್ಣೆ ತಿಕ್ಕಲು ಶುರು ಮಾಡಿದಾಗ ಆರ್‌ಬಿಐ ಇಂಥ ಬಡ್ಡಿ ಇಲ್ಲದ ಸ್ಕೀಮುಗಳ ನಡು ಮುರಿಯಿತು. ಇಂಥ ಸ್ಕೀಮ್‌ಗಳನ್ನು ಘೋಷಿಸುವುದನ್ನೇ ಆರ್‌ಬಿಐ ನಿಷೇಧಿಸಿತು. 

ಆದರೆ ಇ-ಕಾಮರ್ಸ್‌ ಜನಪ್ರಿಯಗೊಂಡ ನಂತರ 0% ಲೋನ್‌ ಎಂಬುದು ಹೊಸ ಹೆಸರು ಪಡೆದು ಅಸ್ತಿತ್ವಕ್ಕೆ ಬಂತು. ಈ ಹೊಸ ಹೆಸರೇ ನೋ ಕಾಸ್ಟ್‌ ಇಎಂಐ! ಆದರೆ ಇದು ಕೆಲಸ ಮಾಡುವ ವಿಧಾನ ಸ್ವಲ್ಪ ವಿಭಿನ್ನ. ಆರ್‌ಬಿಐ ನಿಷೇಧ ಇರುವುದರಿಂದ ಈಗ ಬ್ಯಾಂಕ್‌ಗಳೇ ನೇರವಾಗಿ ಬಡ್ಡಿ ರಿಯಾಯಿತಿ ನೀಡಲಾಗದು. ಹೀಗಾಗಿ ಬ್ಯಾಂಕ್‌ಗಳು ಬಡ್ಡಿ ವಿಧಿಸುತ್ತವೆ. ಆದರೆ ಆ ಬಡ್ಡಿ ಮೊತ್ತವನ್ನು ಕಂಪನಿಗಳು ಕಾರ್ಡ್‌ಗೆ ವಾಪಸ್‌ ನೀಡುತ್ತವೆ.

ಉದಾಹರಣೆಗೆ 30 ಸಾವಿರ ರೂ. ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ನೀವು ಆರು ತಿಂಗಳ ಅವಧಿಯ ನೋ ಕಾಸ್ಟ್‌ ಇಎಂಐ ಪ್ರಕಾರ ಖರೀದಿಸುತ್ತೀರಿ ಎಂದಿಟ್ಟುಕೊಳ್ಳಿ. ಇದಕ್ಕೆ ಸಾಮಾನ್ಯ ಬಡ್ಡಿ ದರದಲ್ಲಿ ತಿಂಗಳಿಗೆ 638 ರೂ. ಬಡ್ಡಿ ವಿಧಿಸಲಾಗುತ್ತದೆ. ಆದರೆ ಬ್ಯಾಂಕ್‌ಗಳು ಆರು ತಿಂಗಳವರೆಗೆ ನಿಮ್ಮ ಕಾರ್ಡ್‌ನಿಂದ ಪ್ರತಿ ತಿಂಗಳೂ ಶೇ. 12 ರ ಬಡ್ಡಿಯಂತೆ 5176 ರೂ. ಪಡೆಯುತ್ತವೆ. ಆದರೆ 176 ರೂ.ಯನ್ನು ನಿಮ್ಮ ಕಾರ್ಡ್‌ಗೆ ವಾಪಸ್‌ ರಿಯಾಯಿತಿ ರೂಪದಲ್ಲಿ ಇ-ಕಾಮರ್ಸ್‌ ಕಂಪನಿ ಅಥವಾ ನೀವು ಯಾವ ಕಂಪನಿಯ ಉತ್ಪನ್ನವನ್ನು ಖರೀದಿಸಿರುತ್ತೀರೋ ಆ ಕಂಪನಿ ವಾಪಸ್‌ ಮಾಡುತ್ತದೆ. ಅಲ್ಲಿಗೆ ನೀವು ಖರೀದಿಸಿದ ಉತ್ಪನ್ನದ ಬೆಲೆ 30 ಸಾವಿರಕ್ಕಿಂತ ಒಂದು ರೂಪಾಯಿಯೂ ಹೆಚ್ಚಾಗುವುದಿಲ್ಲ.

Advertisement

ಆದರೆ ಇಂಥ ಆಫ‌ರ್‌ ಎಲ್ಲ ಉತ್ಪನ್ನಗಳ ಮೇಲೂ ಇರುವುದಿಲ್ಲ. ಅಷ್ಟೇ ಅಲ್ಲ, ಎಲ್ಲ ಕಾರ್ಡ್‌ಗಳ ಮೇಲೂ ಇರುವುದೂ ಇಲ್ಲ. ಆಯ್ದ ಉತ್ಪನ್ನಗಳಿಗೆ, ಆಯ್ದ ಕಾರ್ಡ್‌ಗಳಿಗೆ ಮಾತ್ರ ಈ ಸೌಲಭ್ಯ ಇರುತ್ತದೆ. ಇದಕ್ಕಾಗಿ ಇ-ಕಾಮರ್ಸ್‌ ಕಂಪನಿಗಳು ಬ್ಯಾಂಕ್‌ ಮತ್ತು ಉತ್ಪಾದಕರ ಜೊತೆಗೆ ಒಪ್ಪಂದ ಮಾಡಿಕೊಂಡಿರುತ್ತದೆ. 

ಉದಾಹರಣೆಗೆ ಸ್ಯಾಮ್‌ಸಂಗ್‌ನ ನಿರ್ದಿಷ್ಟ ಮಾಡೆಲ್‌ನ ಟಿ.ವಿಯನ್ನು ಎಚ್‌ಡಿಎಫ್ಸಿ ಕಾರ್ಡ್‌ ಬಳಸಿ ಖರೀದಿಸಿದರೆ ಮಾತ್ರ ನೋ ಕಾಸ್ಟ್‌ ಇಎಂಐ ಅನ್ವಯವಾಗುತ್ತದೆ. ಇದನ್ನು ಪಡೆಯಲು ನೀವು ಸಾಮಾನ್ಯ ಖರೀದಿ ಮಾಡಿದಂತೆಯೇ ಉತ್ಪನ್ನವನ್ನು ಕಾರ್ಟ್‌ಗೆ ಹಾಕಿಕೊಂಡು, ಪಾವತಿ ಮಾಡಲು ಮುಂದುವರಿಯಬೇಕು. ಆಗ ಅಲ್ಲಿ ಇತರ ಆಯ್ಕೆಗಳ ಜೊತೆಗೇ ನೋ ಕಾಸ್ಟ್‌ ಇಎಂಐ ಕೂಡ ಇರುತ್ತದೆ. ಈ ಆಪ್ಷನ್‌ ಆಯ್ಕೆ ಮಾಡಿಕೊಂಡು ಪಾವತಿ ಮಾಡಿದರೆ ಮಾತ್ರ ನೋ ಕಾಸ್ಟ್‌ ಇಎಂಐ ಅನ್ವಯವಾಗುತ್ತದೆ.

ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಕ್ಯಾಮೆರಾ, ರೆಫ್ರಿಜರೇಟರ್‌ಗಳು, ಸ್ಮಾರ್ಟ್‌ಫೋನ್‌ಗಳಿಗೆ ಈ ಕೊಡುಗೆ ಇರುತ್ತದೆ. ಅದರಲ್ಲೂ ಎಸ್‌ಬಿಐ, ಎಚ್‌ಡಿಎಫ್ಸಿ, ಎಕ್ಸಿಸ್‌, ಐಸಿಐಸಿಐ ಬ್ಯಾಂಕ್‌ನಂತಹ ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಪದೇ ಪದೆ ಈ ಸೌಲಭ್ಯ ನೀಡಲಾಗುತ್ತದೆ. ಯಾಕೆಂದರೆ ಈ ಬ್ಯಾಂಕ್‌ಗಳೇ ಹೆಚ್ಚಿನ ಸಂಖ್ಯೆಯ ಕ್ರೆಡಿಟ್‌ ಕಾರ್ಡ್‌ ಹೊಂದಿವೆ. ನೋ ಕಾಸ್ಟ್‌ ಇಎಂಐ  ಎಂಬುದು ಕೇವಲ ಕ್ರೆಡಿಟ್‌ ಕಾರ್ಡ್‌ಗಳ ಮೇಲಷ್ಟೇ ಕೊಡುವ ಕೊಡುಗೆ. ಅಂದರೆ ಕ್ರೆಡಿಟ್‌ ಕಾರ್ಡ್‌ ಇಲ್ಲದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.

ಕ್ರೆಡಿಟ್‌ ಕಾರ್ಡ್‌ ಇಲ್ಲದಿದ್ದರೆ?
ಇಡೀ ದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ ಕೇವಲ 6 ಕೋಟಿ. ಆದರೆ ಡೆಬಿಟ್‌ ಕಾರ್ಡ್‌ ಹೊಂದಿರುವವರು 79 ಕೋಟಿ ಜನರು! ಹಾಗಾದರೆ ಡೆಬಿಟ್‌ ಕಾರ್ಡ್‌ ಮೇಲೆ ಯಾಕೆ ಇಎಂಐ ಕೊಡಬಾರದು ಎಂಬ ಹೊಸ ಕಲ್ಪನೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಈವರೆಗೆ ಸಾಲ ಎಂಬುದು ಕೇವಲ ಕ್ರೆಡಿಟ್‌ ಕಾರ್ಡ್‌ ಮೇಲೆ ಮಾತ್ರವೇ ಸಿಗುತ್ತಿದೆ. ಕ್ರೆಡಿಟ್‌ ಕಾರ್ಡ್‌ ಬಳಸಿದಾತ ಸಾಲ ಹಾಗೂ ಅದರ ಮರುಪಾವತಿಗೆ ಮಾನಸಿಕವಾಗಿ ಸಿದ್ಧವಾಗುತ್ತಾನೆ ಎಂಬುದು ಒಂದು ಪ್ರಮುಖ ಅಂಶವಾದರೆ, ಕ್ರೆಡಿಟ್‌ ಕಾರ್ಡ್‌ ಕೊಡುವಾಗಲೇ ಕಂಪನಿಗಳು ವ್ಯಕ್ತಿಯ ಪ್ರೊಫೈಲ್‌ ತಪಾಸಣೆ ನಡೆಸಿರುವುದರಿಂದ ಸಾಲ ನೀಡುವಾಗ ಪುನಃ ಪ್ರೊಫೈಲ್‌ ಜಾಲಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ ವ್ಯಕ್ತಿಯ ಬಳಿ ಕ್ರೆಡಿಟ್‌ ಕಾರ್ಡ್‌ ಇದೆ ಎಂದಾದರೆ ಸಾಲ ಕೊಡಲು ಕಂಪನಿಗಳಿಗೆ ಧೈರ್ಯ ಬರುತ್ತದೆ.

ಆದರೆ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ ಕಡಿಮೆ ಇರುವುದರಿಂದ ಡೆಬಿಟ್‌ ಕಾರ್ಡ್‌ಗಳ ಮೇಲೂ ಇಎಂಐ ಅವಕಾಶ ನೀಡಿದರೆ ಹೆಚ್ಚು ಜನರನ್ನು ಸೆಳೆಯಬಹುದು ಎಂಬುದು ಇ-ಕಾಮರ್ಸ್‌ ಕಂಪನಿಗಳ ಉದ್ದೇಶ. ಇದೇ ಕಾರಣಕ್ಕೆ ಈಗ ಫ್ಲಿಪ್‌ಕಾರ್ಟ್‌ ಈ ಸೌಲಭ್ಯವನ್ನು ಒದಗಿಸಿದೆ. ಆದರೆ ಎಲ್ಲರಿಗೂ ಇದು ಲಭ್ಯವಿಲ್ಲ. ಹಲವು ದಿನಗಳಿಂದಲೂ ಫ್ಲಿಪ್‌ಕಾರ್ಟ್‌ ಸೇವೆ ಬಳಸುತ್ತಿದ್ದವರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗಿದೆ. ಫ್ಲಿಪ್‌ಕಾರ್ಟ್‌ನ ಅರ್ಹತೆ ಮಾನದಂಡದಲ್ಲಿ ಪಾಸಾದರೆ ಮಾತ್ರ ಡೆಬಿಟ್‌ ಕಾರ್ಡ್‌ ಮೇಲೆ ಇಎಂಐ ಸೌಲಭ್ಯ ಸಿಗುತ್ತದೆ. ಆದರೆ, ಇದು ನೋ ಕಾಸ್ಟ್‌ ಇಎಂಐ ಆಗಿರುವುದಿಲ್ಲ. ಬದಲಿಗೆ, ಬ್ಯಾಂಕ್‌ ವಿಧಿಸುವ ಬಡ್ಡಿ ದರ ಇದಕ್ಕೆ ಅನ್ವಯವಾಗುತ್ತದೆ. ಇನ್ನು ಖರೀದಿಗೆ ಕನಿಷ್ಠ ಮೊತ್ತವನ್ನೂ ನಿಗದಿಪಡಿಸಲಾಗಿದ್ದು, ಇವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತವೆ. ಕೆಲವು ಬ್ಯಾಂಕ್‌ಗಳಲ್ಲಿ 5 ಸಾವಿರ ರೂ. ಇದ್ದರೆ ಇನ್ನೂ ಕೆಲವು ಬ್ಯಾಂಕ್‌ಗಳಲ್ಲಿ 10 ಸಾವಿರ ರೂ. ಇರುತ್ತವೆ.

ಸದ್ಯ ಎಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್ಸಿ ಬ್ಯಾಂಕ್‌ ಮತ್ತು ಎಸ್‌ಬಿಐನಂತಹ ಕೆಲವೇ ಬ್ಯಾಂಕ್‌ಗಳ ಜೊತೆಗೆ ಫ್ಲಿಪ್‌ಕಾರ್ಟ್‌ ಒಪ್ಪಂದ ಮಾಡಿಕೊಂಡಿದೆ. ಈ ಬ್ಯಾಂಕ್‌ಗಳ ಗ್ರಾಹಕರಿಗೆ ಮಾತ್ರವೇ ಡೆಬಿಟ್‌ ಕಾರ್ಡ್‌ ಮೇಲೆ ಇಎಂಐ ಸೌಲಭ್ಯ ನೀಡಲಾಗುತ್ತದೆ. ಇದಕ್ಕೆ ಫ್ಲಿಪ್‌ಕಾರ್ಟ್‌ ಹೇಳುವ ಪ್ರಕಾರ ಬ್ಯಾಂಕ್‌ಗಳು ಅರ್ಹತೆ ಮಾನದಂಡವನ್ನು ನಿಗದಿಪಡಿಸಿವೆ. ವ್ಯಕ್ತಿಯ ಖರೀದಿ ಇತಿಹಾಸ ಹಾಗೂ ಸರಾಸರಿ ಕನಿಷ್ಠ ಠೇವಣಿ ಅಂಶಗಳನ್ನೆಲ್ಲ ಪರಿಗಣಿಸಿ ಅಳೆಯಲಾಗುತ್ತದೆ.

ಅಗತ್ಯವಿದ್ದರೆ ಮಾತ್ರ ಖರೀದಿಸಿ
ಬಹಳಷ್ಟು ಬಾರಿ ಹಳೆಯ ಮಾಡೆಲ್‌ಗ‌ಳ ಮೇಲೆ ಅಥವಾ ಹೆಚ್ಚು ಸೇಲ್‌ ಆಗದ ಮಾಡೆಲ್‌ಗ‌ಳ ಮೇಲೆ ಅಥವಾ ಹೆಚ್ಚು ಸ್ಟಾಕ್‌ ಇರುವ ಮಾಡೆಲ್‌ಗ‌ಳ ಮೇಲೆ ಈ ರೀತಿಯ ಡಿಸ್ಕೌಂಟ್‌ ನೀಡುವುದೇ ಹೆಚ್ಚು. ಹೀಗಾಗಿ ನೋ ಕಾಸ್ಟ್‌ ಇಎಂಐ ಇದೆ ಎಂಬ ಕಾರಣಕ್ಕೆ ವಸ್ತುಗಳನ್ನು ಖರೀದಿಸುವುದು ಮೂರ್ಖತನವಾದೀತು. ಬದಲಿಗೆ ನಾವು ಯಾವ ಸಾಮಗ್ರಿಯನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದೇವೆಯೋ ಅದಕ್ಕೆ ನೋ ಕಾಸ್ಟ್‌ ಇಎಂಐ ಇದ್ದರೆ, ಅದನ್ನು ಖರೀದಿಸುವುದು ಉತ್ತಮ. ಸಾಮಾನ್ಯವಾಗಿ ಹೆಚ್ಚು ಮಾರಾಟವಾಗುವ ಮತ್ತು ಕಡಿಮೆ ಮಾರ್ಜಿನ್‌ ಇರುವ ಉತ್ಪನ್ನಗಳಿಗೆ ಇಂತಹ ಸೌಲಭ್ಯವನ್ನು ನೀಡುವುದಿಲ್ಲ. ಕಡಿಮೆ ಮಾರಾಟವಾಗುವ ಮತ್ತು ಉತ್ತಮ ಮಾರ್ಜಿನ್‌ ಇರುವ ಉತ್ಪನ್ನಗಳಿಗೆ ಈ ಸೌಲಭ್ಯ ಸಾಮಾನ್ಯವಾಗಿ ಸಿಗುತ್ತದೆ.

ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next