Advertisement

ಎಟಿಎಂಗಳಲ್ಲಿ ನೋ ಕ್ಯಾಷ್‌

03:45 AM Apr 10, 2017 | Team Udayavani |

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಎಟಿಎಂಗಳಲ್ಲಿ ಹಣದ ಲಭ್ಯತೆ ಇಲ್ಲದೆ, ಗ್ರಾಹಕರು ಪರದಾಡುವಂತಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಚ್ಚಿನ ಪ್ರಮಾಣ ಎಟಿಎಂಗಳಲ್ಲಂತೂ ಹಣ ಸಿಗುತ್ತಲೇ ಇಲ್ಲ. ಈ ಎಟಿಎಂಗಳಲ್ಲಿ “ಹಣ ಇಲ್ಲ’ ನಾಮಫ‌ಲಕಗಳ ದರ್ಶನ ಆಗುತ್ತಿದೆ. ಇನ್ನು ಕೆಲವು ಎಟಿಎಂಗಳಲ್ಲಿ ಹಣ ಇಲ್ಲ ಎನ್ನುವುದನ್ನು ಹೇಳದೆ, ಎಟಿಎಂ ದುರಸ್ತಿಯಲ್ಲಿದೆ ಎನ್ನುವ ನಾಮಫ‌ಲಕ ಹಾಕಿ, ಗ್ರಾಹಕರ ದಾರಿ ತಪ್ಪಿಸುವ ಕೆಲಸವೂ ಬ್ಯಾಂಕ್‌ಗಳಿಂದ ನಡೆದಿದೆ.

Advertisement

ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಖಾಸಗಿ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಹಣ ಸಿಗುತ್ತದೆ. ಆದರೂ ಕೆಲವೇ ಗಂಟೆಗಳಲ್ಲಿ ಹಣ ಖಾಲಿ ಆಗುತ್ತಿದೆ. ಗ್ರಾಹಕರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಮಗೆ ಬೇಕಾದಾಗ ಹಣ ಸಿಗದೆ, ಎಟಿಎಂನಿಂದ ಎಟಿಎಂಗೆ ಅಲೆದಾಡಬೇಕಾಗಿದೆ.

ಹಣದ ಕೊರತೆ ಯಾಕೆ?
ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನಲ್ಲಿ ನೋಟುಗಳ ಮುದ್ರಣ ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದರಿಂದ ಬ್ಯಾಂಕ್‌ಗಳಿಗೆ ಅಗತ್ಯವಿರುವಷ್ಟು ನೋಟುಗಳ ಸರಬರಾಜು ಮಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ನೋಟಿನ ಅಭಾವವನ್ನು ಎದುರಿಸುತ್ತಿದ್ದು, ಎಟಿಎಂಗಳಿಗೆ ಅಗತ್ಯವಿರುವ ಹಣವನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ.

ಹಳೆಯ ನೋಟುಗಳ ನಿಷೇಧ ಸಂದರ್ಭದಲ್ಲಿ ದಿನದ 24 ಗಂಟೆ ನೋಟು ಮುದ್ರಣದಲ್ಲಿ ತೊಡಗಿದ್ದ ಸಿಬ್ಬಂದಿ ಈಗ ಕೇವಲ ಒಂದೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಬೇಡಿಕೆಗೆ ಅನುಗುಣವಾಗಿ ನೋಟು ಮುದ್ರಿಸಿ ಸರಬರಾಜು ಮಾಡಲು, ಆರ್‌ಬಿಐ ವಿಫ‌ಲವಾಗಿರುವುದು ಎಟಿಎಂಗಳಲ್ಲಿ ಹಣಕಾಸಿನ ಕೊರತೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಸುಮಾರು 800 ಎಟಿಎಂಗಳನ್ನು ಹೊಂದಿರುವ ಕೆನರಾ ಬ್ಯಾಂಕಿಗೆ ದಿನಕ್ಕೆ 200 ಕೋಟಿ ರೂ. ಎಟಿಎಂ ಭರ್ತಿಗಾಗಿ ಹಣ ಬೇಕಾಗುತ್ತದೆ. ಆದರೆ, 15 ದಿನಗಳಿಗೊಮ್ಮೆ 40ರಿಂದ 50 ಕೋಟಿ ರೂ. ಮಾತ್ರ ಆರ್‌ಬಿಐನಿಂದ ಸರಬರಾಜಾಗುತ್ತಿದೆ. ಆರ್‌ಬಿಐ ಸಮರ್ಪಕವಾಗಿ ಹಣವನ್ನು ಪೂರೈಸದಿರುವುದರಿಂದ ಎಟಿಎಂಗಳಲ್ಲಿ ಹಣದ ಕೊರತೆ ಕಾಡುತ್ತಿದೆ.

Advertisement

ಕಳೆದ ಆರು ತಿಂಗಳಲ್ಲಿ ಒಂದು ದಿನ ಹೊರತುಪಡಿಸಿ, ಕೆನರಾ ಬ್ಯಾಂಕಿನ ಯಾವ ಎಟಿಎಂಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಹಣ ಲಭ್ಯವಾಗಿಲ್ಲ. ಆರ್‌ಬಿಐ ಪೂರೈಸುವ ಹಣ ಗ್ರಾಹಕರ ಬೇಡಿಕೆಗೆ ಅಜಗಜಾಂತರ ವ್ಯತ್ಯಾಸ ಇದೆ.

ಈ ಮೊದಲು ಅಗತ್ಯಕ್ಕೆ ತಕ್ಕಂತೆ ಜನ ಎಟಿಎಂಗಳಿಂದ ಹಣ ಡ್ರಾ ಮಾಡುತ್ತಿದ್ದರು. ಆದರೆ, ಈಚೆಗೆ ಇದಕ್ಕೆ ಮಿತಿ ವಿಧಿಸಲಾಗಿದ್ದು, ಅದನ್ನು ಮೀರಿದರೆ ಶುಲ್ಕ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಗ್ರಾಹಕರು ಒಮ್ಮೆಲೆ ಹೆಚ್ಚು ಮೊತ್ತ ಡ್ರಾ ಮಾಡಿಕೊಳ್ಳುತ್ತಿರುವುದು ಹಣದ ಅಭಾವಕ್ಕೆ ಕಾರಣ ಎಂದೂ ಬ್ಯಾಂಕ್‌ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಬ್ಯಾಂಕ್‌ಗಳಿಗೆ ಅಗತ್ಯ ಇರುವಷ್ಟು ನೋಟುಗಳನ್ನು ಮುದ್ರಿಸಿ, ಸರಬರಾಜು ಮಾಡುವಲ್ಲಿ ಆರ್‌ಬಿಐ ವಿಫ‌ಲವಾಗಿರುವುದು ಎಟಿಎಂಗಳಲ್ಲಿನ ಹಣದ ಕೊರತೆಗೆ ಪ್ರಮುಖ ಕಾರಣ. ಇದರಿಂದ ಗ್ರಾಹಕರು ಮಾತ್ರವಲ್ಲ; ಬ್ಯಾಂಕ್‌ಗಳು ಕೂಡ ತೊಂದರೆ ಅನುಭವಿಸುವಂತಾಗಿದ್ದು, ವಹಿವಾಟಿನ ಮೇಲೆ ಬಹಳಷ್ಟು ಪ್ರತಿಕೂಲ ಪರಿಣಾಮ ಬೀರಿದೆ.
-ಎಂ.ಕೆ. ನರಸಿಂಹಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರ ಒಕ್ಕೂಟ (ಐಎನ್‌ಬಿಇಎಫ್)

ಬಸವೇಶ್ವರನಗರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಎಚ್‌ಡಿಎಫ್ಸಿ, ಎಸ್‌ಬಿಐ, ಕೆನರಾ ಬ್ಯಾಂಕ್‌ಗಳ ಏಳೆಂಟು ಎಟಿಎಂಗಳಿಗೆ ಅಲೆದಾಡಿದೆ. ಹಣದ ದರ್ಶನ ಆಗಲಿಲ್ಲ. ಬದಲಿಗೆ “ನೋ ಕ್ಯಾಶ್‌’ ಎಂಬ ಫ‌ಲಕದ ದರ್ಶನ ಆಯಿತು.
– ನಂದಿನಿ ಪ್ರಸಾದ್‌, ಮಂಜುನಾಥನಗರ ನಿವಾಸಿ.

ಜಯನಗರದ 4 ಮತ್ತು 9ನೇ ಬ್ಲಾಕ್‌ನಲ್ಲಿರುವ ಎಸ್‌ಬಿಐ, ಸಿಂಡಿಕೇಟ್‌, ಆಕ್ಸಿಸ್‌, ಕಾರ್ಪೋರೇಷನ್‌ ಬ್ಯಾಂಕ್‌ಗಳ ಹತ್ತಾರು ಎಟಿಎಂಗಳಿಗೆ ಓಡಾಡಿದರೂ ಹಣ ಸಿಗಲಿಲ್ಲ. ಕೆಲವೆಡೆ ದುರಸ್ತಿ ಎಂದರೆ, ಇನ್ನು ಹಲವೆಡೆ ಹಣ ಇರಲಿಲ್ಲ.
– ಕಲ್ಯಾಣ್‌ಸಿಂಗ್‌, ಜಯನಗರ 4ನೇ ಬ್ಲಾಕ್‌ ನಿವಾಸಿ.

Advertisement

Udayavani is now on Telegram. Click here to join our channel and stay updated with the latest news.

Next