Advertisement

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

11:17 PM May 20, 2024 | Team Udayavani |

ಬೆಂಗಳೂರು: ಸರಕಾರಕ್ಕೆ ಒಂದು ವರ್ಷ ತುಂಬಿದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಚುನಾವಣೆ ಫ‌ಲಿತಾಂಶದ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ಹೇಳುವ ಮೂಲಕ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ವೇಳೆ ವ್ಯತಿರಿಕ್ತ ಫ‌ಲಿತಾಂಶ ಬಂದರೆ ತಲೆದಂಡ ಆಗಬಹುದು ಎಂಬ ಭೀತಿಯಲ್ಲಿರುವ ಸಚಿವರಿಗೆ ತಾತ್ಕಾಲಿಕ ನಿರಾಳತೆ ನೀಡಿದ್ದಾರೆ.

Advertisement

ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರಸ್‌ ಕ್ಲಬ್‌ ಸೋಮವಾರ ಹಮ್ಮಿಕೊಂಡಿದ್ದ ಮಾಧ್ಯಮದೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ತೆರಿಗೆ ಹಂಚಿಕೆ, ಅನ್ನಭಾಗ್ಯಕ್ಕೆ ಅಕ್ಕಿ ನೀಡದಿರುವುದು ಸಹಿತ ಹಲವಾರು ವಿಷಯಗಳಲ್ಲಿ ಕೇಂದ್ರದ ಅಸಹಕಾರ ನಡುವೆಯೂ ಕಳೆದ ಒಂದು ವರ್ಷದ ಆಡಳಿತ ನನಗೆ, ನಮ್ಮ ಪಕ್ಷ ಮತ್ತು ಹೈಕಮಾಂಡ್‌ಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲೂ ಜನಮುಖೀ ಆಡಳಿತ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪಕ್ಷದ ಹೈಕಮಾಂಡ್‌ ಮತ್ತು ನಾಯಕರ ಸೂಚನೆ ಬಳಿಕವೂ ಹಲವು ರೀತಿಯ ಪ್ರಭಾವ ಬೀರಿ ಚುನಾವಣ ಕಣಕ್ಕಿಳಿಯುವುದರಿಂದ ತಪ್ಪಿಸಿಕೊಂಡ ಸಚಿವರಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ನೀಡಿದ್ದರು. ಒಂದು ವೇಳೆ ಈ ನಿಟ್ಟಿನಲ್ಲಿ ವಿಫ‌ಲವಾದರೆ ತಲೆದಂಡ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಇದೇ ಕಾರಣಕ್ಕೆ ಕೆಲವು ಸಚಿವರು ತಮ್ಮ ಮಕ್ಕಳು, ಸಂಬಂಧಿಕರನ್ನೇ ಅಖಾಡಕ್ಕಿಳಿಸಿ ಪ್ರತಿಷ್ಠೆಯನ್ನು ಒರೆಗೆ ಹಚ್ಚಿದ್ದರು. ಆದರೂ ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ ಹೇಗೆ ಎಂಬ ಆತಂಕ ಮನೆ ಮಾಡಿದೆ. ಇಂಥ ಹೊತ್ತಿನಲ್ಲಿ ಸಿಎಂ ಹೇಳಿಕೆ ಭೀತಿಯನ್ನು ದೂರ ಮಾಡಿದೆ.

ಚುನಾವಣ ಫ‌ಲಿತಾಂಶದಲ್ಲಿ ನಿರೀಕ್ಷಿತ ಗುರಿ ಸಾಧನೆ ಆಗದಿದ್ದರೆ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 15 ಮತ್ತು ಗರಿಷ್ಠ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸಂಪುಟ ಪುನಾರಚನೆ ಆಲೋಚನೆ ಇಲ್ಲ. ಆದರೆ ನಮ್ಮದು ಹೈಕಮಾಂಡ್‌ ಪಕ್ಷವಾಗಿದ್ದು, ಅಲ್ಲಿ ಏನು ತೀರ್ಮಾನ ಆಗುತ್ತದೋ ಅದು ಅಂತಿಮವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಕಾರಣಕ್ಕೂ 5 ಗ್ಯಾರಂಟಿಗಳು ನಿಲ್ಲುವುದಿಲ್ಲ. 5 ವರ್ಷ ನಿರಂತರವಾಗಿ ಮುಂದುವರಿಯಲಿವೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ, ಖಜಾನೆ ಖಾಲಿಯಾಗಿದೆ ಎಂಬ ವಿಪಕ್ಷದ ಆರೋಪದಲ್ಲಿ ಹುರುಳಿಲ್ಲ. ಎಲ್ಲ ಇಲಾಖೆಗಳಿಗೆ ಈ ಹಿಂದೆ ಅವರು (ಪ್ರತಿಪಕ್ಷಗಳು) ನೀಡಿದ್ದಕ್ಕಿಂತ ಹೆಚ್ಚು ನಾವು ಕೊಟ್ಟಿದ್ದೇವೆ. ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರ 3.09 ಲಕ್ಷ ಕೋಟಿ ರೂ. ಬಜೆಟ್‌ ನೀಡಿತ್ತು. ನಾವು 3.71 ಲಕ್ಷ ಕೋಟಿ ರೂ. ಬಜೆಟ್‌ ಮಂಡಿಸಿದ್ದೇವೆ. ದಿವಾಳಿ ಆಗಿದ್ದರೆ ಇದನ್ನೆಲ್ಲ ಮಾಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.

Advertisement

ಮೀಸಲಾತಿ
ದಲಿತರು ಮತ್ತು ಹಿಂದುಳಿದವರ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದರು ಎಂದು ಪ್ರಧಾನಿ ಮೋದಿ ಆರೋಪಿಸುತ್ತಾರೆ. ಹಾಗಿದ್ದರೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ ಕಾಯ್ದೆ ತಂದಿದ್ದು ಯಾರು? ಗುತ್ತಿಗೆಯಲ್ಲೂ ಮೀಸಲಾತಿ ಜಾರಿಗೊಳಿಸಿದವರು ಯಾರು? ಇಡೀ ದೇಶದಲ್ಲಿ ಮೀಸಲಾತಿಯಿಂದ ಹೊರಗುಳಿದವರು ಯಾರಿ ದ್ದಾರೆ ಹೇಳಲಿ; ಈಚೆಗೆ ಪ್ರಧಾನಿ ಮೋದಿ ಆರ್ಥಿಕ ದುರ್ಬಲ ವರ್ಗಕ್ಕೆ ಶೇ. 10ರಷ್ಟು ಮೀಸಲಾತಿ ಘೋಷಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಜಾತಿ ಜನಗಣತಿಯಿಂದ ಯಾರಿಗೂ ತೊಂದರೆ ಆಗದು
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಸಾಮಾಜಿಕ ಸ್ಥಿತಿಗತಿ ಹೇಗಿದೆ ಅಂತ ತಿಳಿಯಲು ಇದು ಅಗತ್ಯವಾಗಿದೆ. ವರದಿ ಸ್ವೀಕರಿಸಲಾಗಿದ್ದು, ಸಂಪುಟದಲ್ಲಿಟ್ಟು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜ್ವಲ್‌ ಕೇಸ್‌ನಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ
ಪ್ರಜ್ವಲ್‌ ಅಶ್ಲೀಲ ವೀಡಿಯೋ ಬಹಿರಂಗ ಪ್ರಕರಣದ ಬಗ್ಗೆ ತನಿಖೆ ನಡೆದಿದ್ದು, ಕಾನೂನು ರೀತಿಯಲ್ಲಿ ತಪ್ಪಿಸ್ಥರಿಗೆ ಶಿಕ್ಷೆ ಆಗಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಜೆಡಿಎಸ್‌ ಜತೆ ಮೈತ್ರಿ ಬೇಡ ಎಂದು ಪತ್ರ ಬರೆದವರು ದೇವರಾಜೇಗೌಡ. ಆದಾಗ್ಯೂ ಮೈತ್ರಿ ಮಾಡಿಕೊಂಡರು. ಟಿಕೆಟ್‌ ನೀಡಲಾಯಿತು. ಅವರ ಪರ ಪ್ರಚಾರವನ್ನೂ ಮಾಡಲಾಯಿತು. ಅನಂತರ ಎ. 27ಕ್ಕೆ ದೇಶ ಬಿಟ್ಟು ಹೋದವರು ಯಾರು? ಯಾಕೆ ಅವರನ್ನು ಜೆಡಿಎಸ್‌ ಪಕ್ಷದಿಂದ ಅಮಾನತುಗೊಳಿಸಿತು? ಅತ್ಯಾಚಾರ ಆಗಿದೆ ಅಂತ ದೂರು ನೀಡಿದವರು ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ. ಹೀಗಿರುವಾಗ ಬೇರೆಯವರ ಮೇಲೆ ಆರೋಪ ಮಾಡುವುದು ಸರಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ಹೇಳಿದರು.

ಕರ್ನಾಟಕದಿಂದ ಯಾರೂ ಪ್ರಧಾನಿ ಆಗುವವರಿಲ್ಲ
ರಾಜ್ಯದಿಂದ ಪ್ರಧಾನಿ ಆಗುವವರು ಯಾರೂ ಇಲ್ಲ; ಇಂಡಿಯಾ ಒಕ್ಕೂಟದಲ್ಲಿ ಇದ್ದವರೇ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಹತ್ತು ವರ್ಷಗಳ ಹಿಂದೆ ಗುಜರಾತ್‌ ಮಾದರಿ ಎಂದ ನರೇಂದ್ರ ಮೋದಿ ಪ್ರಧಾನಿಯಾದರು. ಈಗ ಕರ್ನಾಟಕ ಮಾದರಿ ಕೇಳಿಬರುತ್ತಿದ್ದು, ಕರ್ನಾಟಕದ ಹಿಂದುಳಿದ ನಾಯಕ ಪ್ರಧಾನಿ ಆಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ದೇಶದಲ್ಲಿ ಇಂಡಿಯಾ ಒಕ್ಕೂಟ ಬಹುಮತ ಸಾಧಿಸಲಿದೆ ಎಂಬ ವಿಶ್ವಾಸ ಇದೆ. ಆದರೆ ಕರ್ನಾಟಕದಿಂದ ಯಾರೂ ಪ್ರಧಾನಿ ಆಗುವವರು ಇಲ್ಲ. ಆ ಒಕ್ಕೂಟದಲ್ಲಿ ಇದ್ದವರಲ್ಲೇ ಒಬ್ಬರನ್ನು ಆಯ್ಕೆ ಮಾಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next