ನರಗುಂದ: ಹಿರೇಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಪರ್ಯಾಯ ರಸ್ತೆಯೂ ಸುಸಜ್ಜಿತ ಇಲ್ಲದೇ ಬನಹಟ್ಟಿ ಗ್ರಾಮಕ್ಕೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಂಡಿದೆ.ಹೀಗಾಗಿ ಗ್ರಾಮಸ್ಥರಿಗೆ ಟಂಟಂ ಅಥವಾ ದ್ವಿಚಕ್ರ ವಾಹನಗಳೇ ಗತಿಯಾಗಿದೆ.
ನರಗುಂದ ಕೇಂದ್ರ ಸ್ಥಾನದಿಂದ 8 ಕಿಮೀ ದೂರದ ತಾಲೂಕಿನ ಬನಹಟ್ಟಿ ಗ್ರಾಮದ ಜನ ನಿತ್ಯ ಪರದಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ನರಗುಂದದಿಂದ ಬನಹಟ್ಟಿ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬನಹಟ್ಟಿ ಗ್ರಾಮದ ಮುಂದಿನ ರಸ್ತೆಗೆ ಹೊಂದಿಕೊಂಡ ಹಿರೇಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಬೆಂಗಳೂರು ಮೂಲದ ಬಿಎಸ್‌ಆರ್ ಇನ್ ಫ್ರಾಟೆಕ್ ಏಜೆನ್ಸಿ 1.24 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಕಾಮಗಾರಿ ವಿಳಂಬವಾಗಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆ ಪಕ್ಕದಲ್ಲಿ ಪರ್ಯಾಯ ರಸ್ತೆ ನಿರ್ಮಿಸಲಾಗಿದೆ.
ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹಿರೇಹಳ್ಳ ತುಂಬಿ ಹರಿದ ಪರಿಣಾಮ ಪರ್ಯಾಯ ರಸ್ತೆ ದುಸ್ತರವಾಗಿದೆ. ಸೇತುವೆ ಸಂಪರ್ಕ ರಸ್ತೆ ನಿರ್ಮಾಣವಿಲ್ಲದೇ ಒಂದು ವಾರದಿಂದ ಗ್ರಾಮಕ್ಕೆ ಬಸ್ ಸಂಚಾರ ಮೊಟಕುಗೊಂಡಿದೆ. ಶನಿವಾರ ಸೇತುವೆ ಸಂಪರ್ಕದ ಒಂದು ಬದಿಗೆ ಮುರಂ ಹಾಕಿ ರಸ್ತೆ ನಿರ್ಮಿಸಿದ್ದು, ಮತ್ತೂಂದು ಬದಿಗೆ ಅಲ್ಪ ಮುರಂ ಹಾಕಿದ ಪರಿಣಾಮ ಬಸ್ ಸೇರಿ ದೊಡ್ಡ ವಾಹನಗಳು ಸಂಚರಿಸಲಾಗದು. ಗ್ರಾಮಸ್ಥರು ನರಗುಂದ ಪಟ್ಟಣಕ್ಕೆ ಬರಲು ಟಂಟಂ, ದ್ವಿಚಕ್ರ ವಾಹನಗಳೇ ಅನಿವಾರ್ಯವಾಗಿದೆ. ಸಾರಿಗೆ ಸಂಸ್ಥೆ ಬಸ್ ಸಂಚಾರವಿಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳ ವ್ಯಾಸಂಗಕ್ಕೂ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆ ಅವ್ಯವಸ್ಥೆ:ಬನಹಟ್ಟಿ ಮುಖ್ಯರಸ್ತೆ ಅವ್ಯವಸ್ಥೆಗೆ ಗ್ರಾಮಸ್ಥರು ನಿತ್ಯ ಪರದಾಡುವಂತಾಗಿದೆ. ಸುಮಾರು 4, 5 ಕಿಮೀ ಅಂತರದಲ್ಲಿ ಹೆಜ್ಜೆಗೊಂದು ಗುಂಡಿಗಳು ಉದ್ಭವಿಸಿ ದ್ವಿಚಕ್ರ ವಾಹನ ಸವಾರರಂತೂ ಕೈಯಲ್ಲಿ ಜೀವ ಹಿಡಿದು ಸಾಗುವಂತಾಗಿದೆ. ನರಗುಂದ-ಬನಹಟ್ಟಿ ರಸ್ತೆ ಸುಧಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.