ಬಸವಕಲ್ಯಾಣ: ದೇಶಕ್ಕೆ ಸ್ವಾತಂತ್ರ್ಯ ದೊರಕಿ ಏಳು ದಶಕ ಕಳೆದರೂ ಮುಡಬಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿರುವ ಬಂದೇನವಾಜ್‌ವಾಡಿ ಗ್ರಾಮ ಬಸ್ ಸಂಚಾರ ಸೌಲಭ್ಯ ಕಂಡಿಲ್ಲ. ಹಾಗಾಗಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಮುಡಬಿ ರಸ್ತೆ ಮಧ್ಯದಿಂದ 1.5 ಕಿ.ಮೀ. ಒಳಗಡೆ ಇರುವ ಬಂದೇನವಾಜ್‌ವಾಡಿ ಗ್ರಾಮ ಯರಂಡಗಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದೆ. ಒಂದು ಸಾವಿರ ಜನಸಂಖ್ಯೆಯುಳ್ಳ ಗ್ರಾಮ ಇದಾಗಿದೆ. ಆದರೆ ಇಂದಿಗೂ ಬಸ್ ಸೌಕರ್ಯ ಇಲ್ಲದ ಕಾರಣ ಗ್ರಾಮಸ್ಥರು ಒಂದು ಕಿ.ಮೀ. ನಡೆದುಕೊಂಡು ಸಂಚರಿಸಬೇಕಾಗಿರುವುದು ಆಕ್ರೋಷಕ್ಕೆ ಕಾರಣವಾಗಿದೆ.
ನಗರ ಅನತಿ ದೂರದಲ್ಲಿರುವ ಈ ಗ್ರಾಮದಿಂದ ಕೆಲಸಕ್ಕೆಂದು ನಿತ್ಯ ನಗರಕ್ಕೆ ಬರುವ ಕಾರ್ಮಿಕರು ಬೈಕ್, ಆಟೋ ಮತ್ತು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ವಿದ್ಯಾರ್ಥಿಗಳು ಮತ್ತು ಮಹಿಳೆಯರು ಗ್ರಾಮದಿಂದ ಮುಡಬಿ ಮುಖ್ಯ ರಸ್ತೆ ವರೆಗೆ ನಡೆದುಕೊಂಡು ಬಸ್ ಹತ್ತಿ ಶಾಲಾ-ಕಾಲೇಜಿಗೆ ಹೋಗುವುದು ಹಲವು ವರ್ಷಗಳ ಕಾಯಕವಾಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒಂದು ಸಾರಿಯೂ ಡಾಂಬರೀಕರಣ ಕಂಡಿಲ್ಲ. ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದು, ಜಲ್ಲಿಕಲ್ಲುಗಳು ಎದ್ದಿವೆ. ಇದರಿಂದ ರಾತ್ರಿ ಸಮಯದಲ್ಲಿ ಅವಘಡಗಳು ಸಂಭವಿಸುತ್ತವೆ. 8 ಗಂಟೆ ನಂತರ ಈ ರಸ್ತೆಯಲ್ಲಿ ಜನರು ಭಯದಲ್ಲೇ ಸಂಚರಿಸಬೇಕಾಗಿದೆ ಎಂದು ಗ್ರಾಮದ ಯುವಕ ಮಾಹಿತಿ ನೀಡಿದರು.
ಗ್ರಾಮಸ್ಥರ ಅನುಕೂಲಕ್ಕಾಗಿ ಮುಡಬಿ ರಸ್ತೆಯಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣ ಬಿದ್ದು ಹೋಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ವೃದ್ಧರು ನಿತ್ಯ ರಸ್ತೆ ಪಕ್ಕದಲ್ಲಿ ನಿಂತು ಬಸ್‌ಗಾಗಿ ಕಾಯುವಂತಾಗಿದೆ. ಆದರೂ, ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಗ್ರಾಮಕ್ಕೆ ಒಂದು ಬಸ್ ಸೌಕರ್ಯ ಕಲ್ಪಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದರು.
ಒಂದು ವೇಳೆ ರಾತ್ರಿ ಸಮಯದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ದೇವರೇ ಗತಿ ಎಂಬಂತಿ ಇಲ್ಲಿನ ಸ್ಥಿತಿ. ಆದ್ದರಿಂದ ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಬಸ್ ಸಂಚಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಬಸವಕಲ್ಯಾಣ: ಬಂದೇನವಾಜ್‌ವಾಡಿ ಗ್ರಾಮದ ಹದಗೆಟ್ಟ ರಸ್ತೆ. ಗ್ರಾಸ್ಥರಿಗಾಗಿ ನಿರ್ಮಿಸಲಾದ ಬಸ್ ತಂಗುದಾಣ ಕಟ್ಟಡ ಪಾಳು ಬಿದ್ದಿದೆ. (ಬಲಚಿತ್ರ).
ವೀರಾರೆಡ್ಡಿ ಆರ್.ಎಸ್.