Advertisement

ಗ್ರಾಮಾಂತರಕ್ಕೆ ಬಸ್ಸಿಲ್ಲದೆ ಮಕ್ಕಳ ಪರದಾಟ : ಪ್ರತಿದಿನ 4-5 ಕಿ.ಮೀ. ನಡೆದೇ ಸಾಗಬೇಕು

11:30 PM Mar 08, 2021 | Team Udayavani |

ಕುಂದಾಪುರ: ಶಾಲಾ ಕಾಲೇಜುಗಳು ಆರಂಭವಾಗಿದ್ದು ಪೂರ್ಣಪ್ರಮಾಣದಲ್ಲಿ ಹಾಜರಾತಿ ಆಗುತ್ತಿದೆ. ಆದರೆ ಇನ್ನೂ ಗ್ರಾಮಾಂತರ ಪ್ರದೇಶದಲ್ಲಿ ಬಸ್‌ಗಳ ಓಡಾಟ ಪೂರ್ಣ ಹಂತದಲ್ಲಿ ಆರಂಭವಾಗಿಲ್ಲ. ಇದರಿಂದಾಗಿ ಶಾಲಾ-ಕಾಲೇಜು ಮಕ್ಕಳಿಗೆ ಸಮಸ್ಯೆಯಾಗಿದೆ.

Advertisement

ಜಪ್ತಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಊರಿನ ವಿದ್ಯಾರ್ಥಿಗಳಿಗೆ ಏಳನೇ ತರಗತಿಯ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲು ಅವಕಾಶವಿದ್ದು, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಬಸ್ರೂರು ಅಥವಾ ಬಿದ್ಕಲ್‌ ಕಟ್ಟೆ ಶಾಲೆ/ಕಾಲೇಜುಗಳಿಗೆ ಹೋಗಬೇಕಾಗುತ್ತದೆ. ಆದರೆ ಇಲ್ಲಿ ಬಸ್ಸು ಸಂಚಾರ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಇದರಿಂದ ಈ ಗ್ರಾಮದ ವಿದ್ಯಾರ್ಥಿಗಳು ಮಳೆಗಾಲವಿರಲಿ, ಬಿಸಿಲಿರಲಿ ಪ್ರತಿದಿನ 4-5 ಕಿ. ಮೀ. ನಡೆದು ಸಾಗಬೇಕಾಗಿದೆ. ಹಳ್ಳಿಯ ಕುಟುಂಬಗಳಾದ ಕಾರಣ ಆಟೋ ಅಥವಾ ಬೇರೆ ವ್ಯವಸ್ಥೆ ಮಾಡಿಕೊಳ್ಳುವಷ್ಟು ಅನುಕೂಲ ಇವರಿಗೆ ಇರುವುದಿಲ್ಲ. ಹೆಚ್ಚು ಬಾಲಕಿಯರೇ ಇರುವುದಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ಕಾಡು ಪ್ರದೇಶವಾದ ಕಾರಣ ರಸ್ತೆಯಲ್ಲಿ ಒಬ್ಬೊಬ್ಬರೇ ನಡೆದು ಹೋಗುವಷ್ಟು ಸುರಕ್ಷಿತವಾಗಿಲ್ಲ. ಈ ಸಮಸ್ಯೆಯಿಂದಾಗಿ ಕೆಲವು ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಗಮನಹರಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.

ಮನವಿ
ಬಸ್ರೂರು-ಹುಣ್ಸೆಮಕ್ಕಿ ಮಾರ್ಗವಾಗಿ ಆದಷ್ಟು ಬೇಗ ಬಸ್‌ ವ್ಯವಸ್ಥೆ ಕಲ್ಪಿಸುವ ಮೂಲಕ ನಮ್ಮ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಬೇಕು ಎಂದು ಡಿಸಿಗೆ ಮನವಿ ನೀಡಲಾಗಿದೆ. -ರಾಘವೇಂದ್ರ ಮೊಗವೀರ, ಜಪ್ತಿ

Advertisement

Udayavani is now on Telegram. Click here to join our channel and stay updated with the latest news.

Next