Advertisement

ಕಟ್ಟಡಗಳಿಗಿಲ್ಲ ಉದ್ಘಾಟನೆ ಭಾಗ್ಯ!

08:37 AM Jul 02, 2019 | Suhan S |

ನರೇಗಲ್ಲ: ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆಯಾದರೂ ಅವು ಉದ್ಘಾಟನೆಗೊಳ್ಳದೇ ಪ್ರಯೋಜನಕ್ಕೆ ಬಾರದಂತಾಗಿದೆ.

Advertisement

ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪಪೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕಳೆದೆರಡು ವರ್ಷಗಳ ಹಿಂದೆ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆತು ಬೃಹತ್‌ ಕಟ್ಟಡ ನಿರ್ಮಿಸಲಾಗಿದೆಯಾದರೂ ಆ ಕಟ್ಟಡಗಳಿಗೆ ಉದ್ಘಾಟನೆ ಭಾಗ್ಯ ದೊರಕದೆ ಇರುವುದು ವಿದ್ಯಾರ್ಥಿಗಳ ಆಸೆಗೆ ತಣ್ಣಿರೆರೆಚಿದಂತಾಗಿದೆ.

ನರೇಗಲ್ಲ ಹೋಬಳಿ ವ್ಯಾಪ್ತಿಯ ಮಾರನಬಸರಿ, ಕಳಕಾಪೂರ, ಹಾಲಕೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರ್ಮಿಸಿರುವ ಆರ್‌ಎಂಎಸ್‌ ಪ್ರೌಢಶಾಲೆಗಳು ಇಂದು ಅನಾಥವಾಗಿವೆ. ಆದರೆ, ಪಟ್ಟಣದಲ್ಲಿರುವ ಆರ್‌ಎಂಎಸ್‌ ಶಾಲಾ ಕಟ್ಟಡಕ್ಕೆ ಸುಮಾರು 80 ಲಕ್ಷ ರೂ.ಗಳ ವೆಚ್ಚದಲ್ಲಿ 10 ಕೊಠಡಿಗಳು ನಿರ್ಮಿಸಲಾಗಿದೆ ಆದರೂ ಉಪಯೋಗಕ್ಕೆ ಬಾರದಂತಾಗಿದೆ.

ಕಟ್ಟಡಗಳು ಸಂಪೂರ್ಣವಾಗಿದೆ ಎಂದು ಎನ್‌ಒಸಿ ಕೊಡುತ್ತಿಲ್ಲ. ಹೀಗಾಗಿ ಪ್ರಾಚಾರ್ಯರು ಹಾಗೂ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಆ ನೂತನ ಕೊಠಡಿಗಳಲ್ಲೇ ಶಾಲೆ ಮತ್ತು ಕಾಲೇಜುಗಳ ತರಗತಿಗಳನ್ನು ಆರಂಭಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದಕ್ಕೆ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ಉತ್ತರ ನೀಡಬೇಕಿದೆ ಎನ್ನುವುದು ಇಲ್ಲಿನ ಪ್ರಜ್ಞಾವಂತರ ಅನಿಸಿಕೆ.

ಸ್ಥಳೀಯ ಸರ್ಕಾರಿ ಪಪೂ ಕಾಲೇಜು ಕಳೆದ 10 ವರ್ಷಗಳಿಂದ ಕೇವಲ 4 ಕೊಠಡಿಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ 2016ರಲ್ಲಿ ನಬಾರ್ಡ್‌ನ ಐಆರ್‌ಡಿಎಫ್‌ ಹಣಕಾಸು ಯೋಜನೆಯಡಿ 81.65 ಲಕ್ಷ ವೆಚ್ಚದಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೆಚ್ಚುವರಿಯಾಗಿ 6 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.ಕರ್ನಾಟಕ ಭೂ ಸೇನಾ ನಿಗಮದಿಂದ ಕಾಮಗಾರಿ ಕೈಗೊಳ್ಳಲಾಗಿತ್ತು. ಆರಂಭದಲ್ಲಿ ವೇಗ ಪಡೆದ ಕಾಮಗಾರಿ ಬಳಿಕ ಅನುದಾನ ವಿಳಂಬ ಸೇರಿದಂತೆ ನಾನಾ ಕಾರಣಗಳಿಂದ 2 ವರ್ಷದವರೆಗೂ ಸ್ಥಗಿತಗೊಂಡಿತ್ತು. ನಂತರ 6 ತಿಂಗಳ ಹಿಂದೆ ಆರಂಭಗೊಂಡ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಮುಗಿಸಲು ಮೀನಾಮೇಷ ಮಾಡಲಾಗುತ್ತಿದೆ. 6 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ಮೂರು ವರ್ಷ ಗತಿಸುತ್ತ ಬಂದರೂ ಕಟ್ಟಡ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಗಗಳಲ್ಲಿ ಒಟ್ಟು 540 ವಿದ್ಯಾರ್ಜನೆ ಮಾಡುತ್ತಿದ್ದು, ಇರುವ 4 ಕೊಠಡಿಗಳಲ್ಲಿಯೇ ನೂರಾರು ವಿದ್ಯಾರ್ಥಿಗಳನ್ನು ಕುರಿ ತುಂಬಿದಂತೆ ತುಂಬಿ ಬೋಧನೆ ಮಾಡಲಾಗುತ್ತಿದೆ. ಅಲ್ಲದೆ ಉದ್ಘಾಟನೆಯಾಗದ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಹೀಗಾದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಪಾಲಕರು ಪ್ರಶ್ನಿಸುತ್ತಾರೆ.

ಕಟ್ಟಡದಲ್ಲಿ ವಿದ್ಯುತ್‌ ಸಂಪರ್ಕ, ಪ್ಯಾನ್‌ ಜೋಡಣೆ ಸೇರಿದಂತೆ ಪ್ರಯೋಗಾಲಯದ ಟೇಬಲ್ ನಿರ್ಮಾಣ ಕೆಲಸ ಬಾಕಿ ಇದೆ. ಈ ಕಾರಣದಿಂದ ಉದ್ಘಾಟನೆಗೆ ಅಡ್ಡಿಯಾಗಿದೆ. ಬೃಹತ್‌ ಪ್ರಮಾಣದ ಕಟ್ಟಡ ಕಟ್ಟಿ, ಸಣ್ಣಪುಟ್ಟ ಕಾರಣಗಳಿಗಾಗಿ ವರ್ಷಗಟ್ಟಲೇ ಕಳೆಯುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ಗ್ರಾಮೀಣ ಪ್ರದೇಶ ಮತ್ತು ಪಟ್ಟಣಕ್ಕೆ ಪಿಯುಸಿ ಕಾಲೇಜ್‌ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿ ಕಾಮಗಾರಿ ಕೈಗೊಂಡಿದ್ದರೆ, ಸಣ್ಣ ಪುಟ್ಟ ಕೆಲಸ ಬಾಕಿ ನೆಪವೊಡ್ಡಿ ಉದ್ಘಾಟನೆ ಮುಂದೂಡುತ್ತಿರುವುದು ಪಾಲಕರಲ್ಲಿ ಅಸಮಾಧಾನ ಮೂಡಿಸಿದೆ.

 

•ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next