ಬೆಳಗಾವಿ: ಲೋಕಸಭೆ ಚುನಾವಣೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾವು ಪಡೆದುಕೊಂಡಿದೆ. ಬಹುತೇಕ ಪ್ರಜ್ಞಾವಂತ ಮತದಾರರನ್ನೇ ಹೊಂದಿರುವ ಈ ಕ್ಷೇತ್ರದಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತ ರಾಷ್ಟ್ರಮಟ್ಟದ ಸುದ್ದಿಗಳು, ಭಾರತೀಯ ಸೇನಾ ಯೋಧರ ಸಾಹಸ, ಪಾಕಿಸ್ತಾನ ಸೈನಿಕರ ಮೇಲೆ ನಮ್ಮವರ ಪ್ರತೀಕಾರದ ಬಗ್ಗೆ ಸ್ವಾರಸ್ಯಕರ ಚರ್ಚೆಯಾಗುತ್ತಿದೆ. ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಚಾರದಲ್ಲಿ ಪೈಪೋಟಿ ನಡೆಸಿವೆ. ಪ್ರಚಾರದ ವಿಷಯದಲ್ಲಿ ಒಂದು ಹೆಜ್ಜೆ ಮುಂದಿರುವ ಬಿಜೆಪಿ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ಕರೆಸಿ ಪ್ರಚಾರ ನಡೆಸಿದೆ.
ಸಿನಿ ತಾರೆಯರು ಸಹ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಇದುವರೆಗೆ ಒಂದಿಬ್ಬರು ರಾಜ್ಯಮಟ್ಟದ ನಾಯಕರು ಮಾತ್ರ ಪ್ರಚಾರ ಮಾಡಿದ್ದಾರೆ. ಮನೆ ಮನೆಗೆ ಭೇಟಿ, ಮತದಾರರ ಮನವೊಲಿಕೆಯ ಕಸರತ್ತು ಬಹಳ ಜೋರಾಗಿ ನಡೆದಿದೆ.
ಅಧಿಕ ಸಂಖ್ಯೆಯಲ್ಲಿ ಮರಾಠಿ ಭಾಷಿಕ ಮತದಾರರನ್ನೇ ಹೊಂದಿರುವ ಬೆಳಗಾವಿ ದಕ್ಷಿಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಗಡಿ ಮತ್ತು ಭಾಷಾ ವಿವಾದಕ್ಕಿಂತ ಅಭಿವೃದ್ಧಿ ಕಾರ್ಯಗಳೇ ಹೆಚ್ಚು ಸುದ್ದಿ ಮಾಡಿರುವುದು ಇದಕ್ಕೆ ಸಾಕ್ಷಿ. ಯುವ ಸಮುದಾಯ ಚುನಾವಣೆ ಹಾಗೂ ಮತದಾನದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿರುವುದು ಇಲ್ಲಿಯ ವಿಶೇಷ.
ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ನಾಯಕರನ್ನು ನೋಡಿ ಮತದಾನ ಮಾಡುವ ಇಲ್ಲಿಯ ಜನ ಲೋಕಸಭೆ ಚುನಾವಣೆ ಬಂದಾಗ ಪ್ರಮುಖ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಧಾನಿ ಅಭ್ಯರ್ಥಿಯನ್ನು ನೋಡುತ್ತಾರೆ. ಚುನಾವಣೆಗೆ ತಕ್ಕಂತೆ ಇಲ್ಲಿಯ ಮತದಾರರ ಮನಸ್ಥಿತಿಯೂ ಬದಲಾಗುತ್ತದೆ.
ಮರಾಠಿ ಭಾಷಿಕ ಮತದಾರರಲ್ಲಿ ವಿಶೇಷವಾಗಿ ಯುವ ಸಮುದಾಯದಲ್ಲಿ ಬದಲಾವಣೆ ಕಾಣುತ್ತಿದೆ. ಇದುವರೆಗೆ ತಮಗೆ ಎಂಇಎಸ್ ಬಿಟ್ಟರೆ ಬೇರೆ ಯಾವ ಪಕ್ಷವೂ ಗೊತ್ತಿಲ್ಲ ಎನ್ನುತ್ತಿದ್ದ ಮತದಾರರು ಈಗ ಅಭಿವೃದ್ಧಿ ಬೇಕು. ಉದ್ಯೋಗ ಸೃಷ್ಟಿಯಾಗಬೇಕು ಎಂಬ ಮನೋಭಾವದೊಂದಿಗೆ ರಾಷ್ಟ್ರೀಯ ಪಕ್ಷಗಳತ್ತ ಮುಖಮಾಡಿದ್ದಾರೆ. ಅಭಿವೃದ್ಧಿಯ ಜೊತೆಗೆ ಹಿಂದುತ್ವ ವಿಷಯ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಕಾರ್ಮಿಕ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಬಹಳವಾಗಿ ಕಾಡುತ್ತಿರುವ ವಾಹನ ದಟ್ಟಣೆ ಸಮಸ್ಯೆಗೆ ಎರಡು ರೈಲ್ವೇ ಮೇಲು ಸೇತುವೆ ನಿರ್ಮಾಣ ತಕ್ಕಮಟ್ಟಿಗೆ ಪರಿಹಾರ ದೊರಕಿಸಿದೆ. ಹಳೆಯ ರೈಲ್ವೆ ಮೇಲು ಸೇತುವೆ ಅಗಲೀಕರಣಗೊಂಡು ಮರು ನಿರ್ಮಾಣಗೊಂಡಿರುವುದು ಈ ಮಾರ್ಗದ ರಸ್ತೆ ಸಂಚಾರಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಆದರೆ ಕೈಗಾರಿಕಾ ಕ್ಷೇತ್ರ ಇನ್ನೂ ಸುಧಾರಣೆಯಾಗಬೇಕು.
ಬಡ ಹಾಗೂ ಮಧ್ಯಮ ವರ್ಗದವರಿಗೆ ಉದ್ಯೊಗ ಸಿಗುವಂತಾಗಬೇಕು. ಇದಕ್ಕೆ ಈ ಭಾಗದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಬರಬೇಕು ಎಂಬ ಅಭಿಪ್ರಾಯ ಇದೆ. ಕ್ಷೇತ್ರದಲ್ಲಿ ಮೊದಲಿನ ಸ್ಥಿತಿ ಇಲ್ಲ. ಮೂಲಭೂತ ಸೌಲಭ್ಯಗಳ ದೃಷ್ಟಿಯಿಂದ ಸಾಕಷ್ಟು ಮಹತ್ತರ ಬದಲಾವಣೆ ಆಗಿದೆ. ರಸ್ತೆಗಳ ಚಿತ್ರ ಬಹಳ ಬದಲಾಗಿದೆ. ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಇದು ನಮ್ಮ ಕ್ಷೇತ್ರದಲ್ಲೂ ಆಗಬೇಕು ಎಂಬ ಆಸೆಯಿಂದ ಯುವಕರೂ ಸಹ ಚುನಾವಣೆಯನ್ನು ಆಸಕ್ತಿಯಿಂದ ನೋಡುವಂತೆ ಮಾಡಿದೆ.