Advertisement

ಆರು ತಿಂಗಳಾದರೂ ಪುಸ್ತಕ-ಸಮವಸ್ತ್ರವಿಲ್ಲ!

02:56 PM Nov 26, 2019 | Suhan S |

ಗಜೇಂದ್ರಗಡ: ಸಾಮಾಜಿಕವಾಗಿ ಹಿಂದುಳಿದ ಬಡ ಕುಟುಂಬಗಳ ಮಕ್ಕಳ ಪಾಲಿನ ಆಶಾಕಿರಣವಾಗಬೇಕಿದ್ದ ಮೌಲಾನಾ ಆಜಾದ ಶಾಲೆಯೇ ಹಿಂದುಳಿದುಬಿಟ್ಟಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳು ಈವರೆಗೂ ದೊರೆಯದಿರುವುದು

Advertisement

ವಿದ್ಯಾಭ್ಯಾಸಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಅಲ್ಪಸಂಖ್ಯಾತರ ಜೊತೆಗೆ ಹಿಂದುಳಿದ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮಹದಾಸೆಯೊಂದಿಗೆ ಪಟ್ಟಣದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಎರಡು ವರ್ಷದ ಹಿಂದೆಯೇ ಆರಂಭವಾಗಿರುವ ಮೌಲಾನಾ

ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆ ಕೇವಲ ಕಾಟಾಚಾರಕ್ಕೆಂಬಂತಾಗಿದೆ. ಸರ್ಕಾರದ ಸೌಲಭ್ಯಗಳು ಇಲ್ಲಿ ಮರೀಚಿಕೆಯಾಗಿದ್ದು, ಇಲಾಖೆಯಿಂದ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ನೂತನವಾಗಿ ತೆರೆದಿರುವ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಕ್ಕಳ ವಿದ್ಯಾಭ್‌ಯಾಸಕ್ಕೆ ಅಡಚಣೆ ಉಂಟಾಗಬಾರದೆನ್ನುವ ಉದ್ದೇಶದಿಂದ ಸರ್ಕಾರ ಅಲ್ಪಸಂಖ್ಯಾತ ಇಲಾಖೆ ಮೂಲಕ ಕೋಟ್ಯಂತರ ಅನುದಾನ ನೀಡುತ್ತಿದೆ. ಆದರೆ ಕೆಲ ಅಧಿಕಾರಿಗಳ ನಿರ್ಲಕ್ಷದಿಂದಾಗಿ ವಿದ್ಯಾಕೇಂದ್ರಗಳು ಸೌಲಭ್ಯ ವಂಚಿತವಾಗಿ ಕೊರಗುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಾಠ ಪ್ರವಚನ ನಡೆಯುತ್ತಿದ್ದರೂ ಕುಳಿತುಕೊಳ್ಳಲು ಆಸನಗಳಿಲ್ಲ. ಸಮವಸ್ತ್ರವಂತೂ ಗಗನಕುಸುಮವಾಗಿದೆ. ನಿತ್ಯ ವಿದ್ಯಾರ್ಥಿಗಳು ಒಂದಿಲ್ಲೊಂದು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಗೋಜಿಗೆ ಹೋಗದಿರುವುದು ಪಾಲಕರನ್ನು ಕೆರಳಿಸುವಂತೆ ಮಾಡಿದೆ.

ಡೆಸ್ಕ್  ಗಳಿಲ್ಲ-ಸಮವಸ್ತ್ರವಿಲ್ಲ : 6ನೇ ತರಗತಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್ಗಳಿಲ್ಲ. ಹೀಗಾಗಿ ನೆಲದಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ವರ್ಷಕ್ಕೆ ಮೂರು ಜೊತೆ ಸಮವಸ್ತ್ರ ವಿತರಣೆ ಮಾಡಬೇಕಿತ್ತು.ಆದರೆ ಈವರೆಗೂ ಒಂದು ಜೊತೆ ಸಮವಸ್ತ್ರ ಸಹ ವಿದ್ಯಾರ್ಥಿಗಳಿಗೆ ನೀಡಿಲ್ಲ. ಹಿಂದುಳಿದ ಮಕ್ಕಳ ಭವಿಷ್ಯಕ್ಕೆ ನಾಂದಿಯಾಗಬೇಕಿದ್ದ ಶಾಲೆ ಜನಪ್ರತಿನಿಧಿ ಗಳ ಮತ್ತು ಸಂಬಂಧಪಟ್ಟ ಇಲಾಖೆಯ ಸಂಪೂರ್ಣ ನಿರ್ಲಕ್ಷಕ್ಕೆ ಒಳಪಟ್ಟಿದೆ. ಕೂಡಲೇ ಅಲ್ಪಸಂಖ್ಯಾತ ಇಲಾಖೆ ಮೂಲಸೌಲಭ್ಯ ಒದಗಿಸಲು ಮುಂದಾಗಬೇಕಿದೆ.

Advertisement

ಕಳಪೆ ಶೂ ಆರೋಪ: ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರ ಉಚಿತವಾಗಿ ವರ್ಷಕ್ಕೆ ಎರಡು ಜೊತೆ ಶೂಗಳನ್ನು ವಿತರಣೆ ಮಾಡುತ್ತಿದೆ. ಆದರೆ ಮೌಲಾನಾ ಆಜಾದ ಶಾಲೆಗೆ ಪೂರೈಕೆಯಾಗಿರುವ ಶೂ ಕಳಪೆ ಗುಣಮಟ್ಟದಿಂದ ಕೂಡಿದೆ. ವಿತರಣೆಯಾದ ತಿಂಗಳಲ್ಲಿಯೇ ಶೂ ಸಂಪೂರ್ಣ ಕಿತ್ತು ಹೋಗಿದ್ದು, ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.

ಪೂರೈಕೆಯಾಗದ ಪಠ್ಯಪುಸ್ತಕಗಳು : ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳು ಗತಿಸಿವೆ. ಆದರೆ 6 ತರಗತಿ ವಿದ್ಯಾರ್ಥಿಗಳ ಹಿಂದಿ ಮತ್ತು ಗಣಿತ ವಿಷಯಗಳ ಪುಸ್ತಕಗಳು ಈವರೆಗೂ ವಿತರಣೆಯಾಗಿಲ್ಲ. ಶಾಲೆಯ ಶಿಕ್ಷಕರು ಸಂಬಂಧಪಟ್ಟ ಇಲಾಖೆಗೆ ಹಣ ಭರಣ ಮಾಡಿದ್ದರೂ ಪುಸ್ತಕಗಳ ಪೂರೈಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಮಕ್ಕಳ ವಿದ್ಯಾರ್ಜನೆಗೆ ಹಿನ್ನಡೆಯಾಗಿದೆ. 6 ಮತ್ತು 7ನೇ ತರಗತಿಯನ್ನು ಹೊಂದಿರುವ ಈ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಇದೆ. ಶಾಲೆಯಲ್ಲಿ ಶೌಚಾಲಯವಿದ್ದರೂ ನೀರಿನ ಸೌಲಭ್ಯ ಇಲ್ಲದ್ದರಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.

ರಾಜ್ಯದ ಎಲ್ಲ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗಿದೆ. ಜೊತೆಗೆ ಶಾಲೆಗೆ ಮೂಲಸೌಲಭ್ಯ ಕಲ್ಪಿಸುವ ಕುರಿತು ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಲೆಯ ಶಿಕ್ಷಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. -ಗೋಪಾಲ ಲಮಾಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಅಧಿಕಾರಿ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next